ಸರ್ಕಾರ-ಸಾರ್ವಜನಿಕ ವ್ಯವಸ್ಥೆಯಲ್ಲಿ ವಕೀಲರು ಹೆಚ್ಚು ತೊಡಗಿಸಿಕೊಳ್ಳಬೇಕು-ನ್ಯಾ.ಕೆ.ಎನ್.ಫಣೀಂದ್ರ ಕರೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸರ್ಕಾರದ ಆಡಳಿತದಲ್ಲಿ
, ಸಾಮಾಜಿಕ ಹಾಗೂ ಸಾರ್ವಜನಿಕ ವ್ಯವಸ್ಥೆಯಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಇಂದು ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತವನ್ನು ವಕೀಲರ ಪಾತ್ರದ ಕುರಿತು ವಕೀಲರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಸ್ವಾತಂತ್ರ್ಯ ಹೋರಾಟ ಸೇರಿದಂತೆ ಇಡೀ ರಾಷ್ಟ್ರದ ಹಿನ್ನೆಲೆಯನ್ನು ಪರಿಗಣಿಸಿದರೆ ವಕೀಲ ವೃಂದದ ಪಾತ್ರ ಮಹತ್ವದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ, ಸಂವಿಧಾನವನ್ನು ರಚಿಸಿದವರು, ಭಾರತ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಹೆಚ್ಚಿನವರು ವಕೀಲ ವೃತ್ತಿಯಿಂದ ಹೋದವರು. ಅದಕ್ಕಾಗಿಯೇ ಈ ವೃತ್ತಿಯನ್ನು ಶ್ರೇಷ್ಠವೆಂದು ಭಾವಿಸಲಾಗುತ್ತದೆ. ದೇಶದ ಹಿನ್ನೆಲೆಯನ್ನು ಗಮನಿಸಿದಾಗ ಅನೂಚಾನವಾಗಿ ವಕೀಲರ ಸೇವೆ ಅನನ್ಯವಾಗಿ ಇಡೀ ರಾಷ್ಟ್ರಕ್ಕೆ ದೊರಕುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಒಳಾಂಗಣಕ್ಕೆ ಮಾತ್ರ ಹೆಚ್ಚು ಅಳವಡಿಸಿಕೊಂಡು ವಕೀಲರು ಕಾರ್ಯ ನಿರ್ವಹಿಸುತ್ತಿದ್ದಾರೆ ಅನ್ನಿಸುತ್ತಿದೆ ಎಂದರು.

೧೯೮೭ ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಾಗ ಕಾನೂನು ಜಾಗೃತಿ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ವಕೀಲರು, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಯೇ ಕುಳಿತು ನಡೆಸಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಈ ಪ್ರಾಧಿಕಾರ ಹೆಮ್ಮರವಾಗಿ ಬೆಳೆದಿದ್ದು, ಈಗ ವಕೀಲರು ಈ ಕಾರ್ಯಕ್ರಮದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

- Advertisement - 

ನ್ಯಾಯಾಲಯದ ಕಲಾಪದ ಹೊರತಾಗಿಯೂ ವಕೀಲರು ತಮ್ಮನ್ನು ತೊಡಗಿಸಿಕೊಳ್ಳಬಹುದು. ಭಾರತದ ಸಂವಿಧಾನ ನಮಗೆಲ್ಲರಿಗೂ ಎಲ್ಲ ಧರ್ಮಗಳನ್ನು ಮೀರಿದ ಧರ್ಮಗ್ರಂಥ. ಅದರಲ್ಲಿ ಜನರ ಜೀವನ ಹೇಗಿರಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಬೇಕಾದಷ್ಟು ಪ್ರಕರಣಗಳಲ್ಲಿ ಸಂವಿಧಾನದ ಆಶಯಗಳನ್ನು ಬಿಂಬಿಸುತ್ತಾ ಬಂದಿದೆ ಎಂದು ತಿಳಿಸಿದರು.

ಉತ್ಕೃಷ್ಟ ಜೀವನ ಜನರಿಗೆ ಒದಗಿಸುವಲ್ಲಿ ಸಂವಿಧಾನದಿಂದ ಉದ್ಭವಿಸಿದ ಕಾನೂನುಗಳ ಪಾತ್ರ ಮಹತ್ವಪೂರ್ಣವಾದುದು. ಆ ಕಾನೂನುಗಳ ಆಧಾರದಲ್ಲಿ ಪಡೆಯಬಹುದಾದ ಹಕ್ಕುಗಳ ಬಗ್ಗೆ, ಆ ಹಕ್ಕುಗಳ ಮೂಲಕ ಜನರಿಗೆ ಸವಲತ್ತುಗಳನ್ನು ಕೊಡಿಸುವ ಕರ್ತವ್ಯ ನಮ್ಮ ಗುರುತರ ಜವಾಬ್ದಾರಿ.

ಸಾರ್ವಜನಿಕ ಆಡಳಿತದ ಪ್ರತಿಯೊಂದು ಭಾಗದಲ್ಲೂ ವಕೀಲರ ಪಾತ್ರವಿರಬೇಕು. ಸಾರ್ವಜನಿಕ ಆಡಳಿತದಲ್ಲಿ ನಮಗೆ ಬೇಕಾಗಿರುವುದು ಪ್ರಜೆಗಳ ನಡವಳಿಕೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು, ಹಕ್ಕು ಬಾಧ್ಯತೆಗಳನ್ನು ಪಡೆಯಲು ಬೇಕಿರುವ ಕಾನೂನುಗಳು, ವೈಯಕ್ತಿಕ ಹಾಗೂ ದೇಶದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಕಾನೂನುಗಳು, ಇದಕ್ಕೆ ಅಗತ್ಯವಾದ ಮೂರು ಅಂಗಗಳನ್ನು ಗಮನಿಸಿದಾಗ ನಮ್ಮ ಪಾತ್ರ ಅಗತ್ಯವಿದೆ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಉಪಲೋಕಾಯುಕ್ತರ ಜೊತೆ ಆಗಮಿಸಿದ ಇತರ ನ್ಯಾಯಾಧೀಶರುಗಳಾದ ಪೃಥ್ವಿರಾಜ್ ವರ್ಣೇಕರ್
, ಶಿವಾಜಿ ಅನಂತ್ ನಲವಾಡೆ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ವಿ.ಟಿ.ಥೋಮಸ್, ಜಿಲ್ಲೆಯ ಇತರ ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಚೇಂದ್ರ, ಇತರ ಪದಾಧಿಕಾರಿಗಳು, ವಕೀಲರು ಭಾಗವಹಿಸಿದ್ದರು.

 

 

Share This Article
error: Content is protected !!
";