ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು ಪಡಿಸಿದ ಸರ್ಕಾರ, ರೈತರು ಒಪ್ಪಿ ಜಮೀನು ನೀಡಿದರೆ ಖರೀದಿ-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ಕೈಬಿಡುವಂತೆ ಆಗ್ರಹಿಸಿ ಮೂರುವರೆ ವರ್ಷಗಳಿಂದ ನಡೆಸುತ್ತಿದ್ದ ರೈತರ ಅವಿರತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು ಪಡಿಸಲು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ
, ಜಮೀನು ನೀಡಲು ಒಪ್ಪುವ ರೈತರಿಗೆ ಹೆಚ್ಚಿನ ದರ ಹಾಗೂ ಹೆಚ್ಚಿನ ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.‌

2022ರಲ್ಲಿ ರಾಜ್ಯ ಸರ್ಕಾರ ದೇವನಹಳ್ಳಿಯಲ್ಲಿ ಏರೋಸ್ಪೇಸ್ ನಿರ್ಮಾಣಕ್ಕೆ 1771 ಎಕರೆ ಭೂಮಿ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಸರ್ಕಾರ ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಶಾಂತ ರೀತಿಯ ಹೋರಾಟಕ್ಕೆ ರೈತರು ಮುಂದಾದರು. ನಂತರ ನಟ ಪ್ರಕಾಶ್ ರಾಜ್ ಅವರು ರೈತರ ಪ್ರತಿಭಟನೆಗೆ ಸಾಥ್ ನೀಡಿದ್ದರು. ಸರ್ಕಾರ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ವಶಕ್ಕೆ ಪಡೆಯಬಾರದು ಎಂದು ಆಗ್ರಹಿಸಿದ್ದರು.

- Advertisement - 

ಸರ್ಕಾರ ರೈತ ಮುಖಂಡರ ಜೊತೆಗೆ ಮಾತುಕತೆಗೆ ಮುಂದಾಗಿಯಿತು. ಜುಲೈ 4ರ ಮೊದಲ ಮಾತುಕತೆ ಅಪೂರ್ಣವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಮಾತುಕತೆಗೆ ದಿನ ನಿಗದಿ ಮಾಡಿತ್ತು. ವಿವಾದ ಬಗೆಹರಿಸಲು ಸಿಎಂ ಸಿದ್ದರಾಮಯ್ಯ 15 ದಿನಗಳ ಕಾಲಾವಕಾಶ ಕೋರಿದ್ದರು. ಇದರ ನಡುವೆ ರೈತರು ರೈತರು ರಾಹುಲ್ ಗಾಂಧಿ ಮಧ್ಯ ಪ್ರವೇಶಕ್ಕೂ ಆಗ್ರಹಿಸಿದ್ದು ಇತಿಹಾಸ.

ವಿಧಾನಸೌದಧಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜು.15 ರಂದು ಮಂಗಳವಾರ ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಜೊತೆ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ದೇವನಹಳ್ಳಿ ಚನ್ನರಾಯಪಟ್ಟಣದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಜಮೀನು ಸ್ವಾಧೀನ‌ಪಡಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ರೈತರು ಮತ್ತು ಸಂಘಟನೆಗಳು ಜಮೀನು ಕೊಡಲು ಆಗುವುದಿಲ್ಲ.‌ ಜಮೀನಿನಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಅದೇ ನಮ್ಮ ಮುಖ್ಯ ಕಸುಬು. ಅದೇ ಜೀವನಾಧಾರ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಮೀಪ ಇರುವುದರಿಂದ ಹಾಗೂ ಗ್ರೀನ್ ಬೆಲ್ಟ್ ಆಗಿರುವುದರಿಂದ ಸ್ವಾಧೀನ ಬೇಡ ಎಂದಿದ್ದಾರೆ ಎಂದು ತಿಳಿಸಿದರು.

- Advertisement - 

ಜನಪ್ರತಿನಿಧಿಗಳ ಅಭಿಪ್ರಾಯ, ರೈತರ, ಹೋರಾಟಗಾರರ ಅಹವಾಲು ಕೇಳಿದ್ದೇವೆ.‌ ಇದು ವಿಶಿಷ್ಟ ಮತ್ತು ಐತಿಹಾಸಿಕ ಹೋರಾಟವಾಗಿದೆ. ಸರ್ಕಾರ ಸಾಧಕ, ಬಾಧಕ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರಲಾಗಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಸಿಎಂ ತಿಳಿಸಿದರು.

ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದು ಜಮೀನು ನೀಡಲು ಇಚ್ಚಿಸುವವರ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಸ್ವಯಂ ಪ್ರೇರಿತವಾಗಿ ಜಮೀನು ಕೊಡಲು ರೈತರು ಮುಂದೆ ಬಂದರೆ ಅಂಥ ಜಮೀನನ್ನು ಒಪ್ಪಂದದ ಮೇಲೆ ತೆಗೆದುಕೊಳ್ಳುತ್ತೇವೆ. ಅದನ್ನು ಯಾರು ತಡೆಯಲು ಆಗಲ್ಲ. ಕೈಗಾರಿಕೆ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಅಂಥ ರೈತರಿಗೆ ಸೂಕ್ತ ಪಡಿಹಾರ ಕೊಡುತ್ತೇವೆ. ಅಭಿವೃದ್ಧಿ ಪಡಿಸಿದ ಜಮೀನಿನಲ್ಲಿ 50% ರೈತರಿಗೆ ಕೊಡುತ್ತೇವೆ. ಯಾರು ಕೊಡಲು ಒಪ್ಪಲ್ಲ ಅವರ ಜಮೀನುಗಳನ್ನು ಕೈ ಬಿಡುತ್ತೇವೆ. ಆ ಜಮೀನುಗಳ ಅಧಿಸೂಚನೆಯನ್ನೇ ಕೈ ಬಿಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜಮೀನು ಕೊಡಲು ಒಪ್ಪುವ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರ ನೀಡಲಿದ್ದೇವೆ. ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ. ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನ ಪಡಿಸಿ ಕೈಗಾರಿಕೆ ಪ್ರಾರಂಭಿಸಲು ಸರ್ಕಾರ ಮುಂದಾಗಬೇಕಾಗುತ್ತದೆ ಎಂದು ಸಿಎಂ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಸರ್ಕಾರ 1777 ಎಕರೆ ಜಮೀನು ಸ್ವಾಧೀನಪಡಿಸಿ, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶ. ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು. ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ. ಜಮೀನು ಸ್ವಾಧೀನ ಕೈಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಸರ್ಕಾರ ರೈತಪರವಾಗಿದ್ದು, ಅವರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ, ಭೈರತಿ ಸುರೇಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಅಡ್ವಕೇಟ್ ಜನರಲ್ ಶಶಿಕಿರಣ ಶೆಟ್ಟಿ, ರೈತ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

 ಈ ಜಮೀನು ಬೆಂಗಳೂರು ಸಮೀಪ ಇರುವುದರಿಂದ ಕೈ ಬಿಡಲು ತೀರ್ಮಾನ ಮಾಡಲಾಗಿದೆ. ಭೂ ಸ್ವಾಧೀನ ವಿರುದ್ಧ ಬಹಳ ಹೋರಾಟ ಮಾಡಲಾಗಿದೆ. ಎಲ್ಲಾ ರೈತರು ತೀವ್ರ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಭೂ ಸ್ವಾಧಿನ ಅಧಿಸೂಚನೆ ಕೈ ಬಿಡಲಾಗಿದೆ. ಆದರೆ, ಎಲ್ಲದಕ್ಕೂ ಈ ತೀರ್ಮಾನ ಅನ್ವಯವಾಗಲ್ಲ. ಯಾರು ಜಮೀನು ನೀಡಲು ಒಪ್ಪಲ್ಲ ಅದು ಕೃಷಿ ಜಮೀನಾಗಿ ಉಳಿಯಲಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

ಹೋರಾಟಕ್ಕೆ ಸಂದ ಜಯ: ನಟ ಪ್ರಕಾಶ್ ರಾಜ್ ಮಾತನಾಡಿ, ಇದು ರೈತರ ಹೋರಾಟದ ಜಯ. ಕಲಾವಿದರು, ಸಂಘಟನೆಗಳು ಈ ಹೋರಾಟದ ಹಿಂದೆ ನಿಂತು ರೈತರಿಗೆ ಸಾಥ್ ನೀಡಿದರು‌. ಇದು ಐತಿಹಾಸಿಕ ಜಯವಾಗಿದೆ. ಸಿಎಂ ನಮ್ಮ ನಂಬಿಕೆ ಹುಸಿ ಮಾಡಲಿಲ್ಲ‌. ನೋಟಿಫಿಕೇಷನ್ ಕೈ ಬಿಡಲಾಗಿದೆ‌. ದೇವನಹಳ್ಳಿ ಚಳುವಳಿಗೆ ಇದು ಮೊದಲ ಜಯವಾಗಿದೆ. ಕೆಲ ರೈತರು ಜಮೀನು ಕೊಡ್ತಾರೆ ಎಂದು ಹೇಳಿದ್ದಾರೆ ನೊಡೋಣ. ಬೇಡ ಅನ್ನೋದಕ್ಕೆ ನಾವು ಯಾರು ಎಂದು ಪ್ರಕಾಶ್ ರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಧ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ಮಾತನಾಡಿ, ರೈತರ ಸಂಘಟಿತ ಹೋರಾಟ, ಕಲಾವಿದರು ಪ್ರಗತಿಪರರು ಹೋರಾಟ ಮಾಡಿದ್ದೆವು‌. ಸರ್ಕಾರ ನೋಟಿಫಿಕೇಷನ್ ರದ್ದು ಮಾಡುತ್ತದೆ. ಭಾರತದಲ್ಲಿ ಕೃಷಿಗೆ ನಮ್ಮ ಬೆಂಬಲ. ಫಲವತ್ತಾದ ನೀರಾವರಿ ಭೂಮಿ ಸ್ವಾಧೀನ ಪಡೆದುಕೊಳ್ಳಬಾರದು. ಬಲವಂತದ ಭೂಸ್ವಾಧೀನಕ್ಕೆ ನಮ್ಮ ವಿರೋಧ ಇದೆ. ಇದರ ಹಿಂದೆ ಯಾವ ರಿಯಲ್ ಎಸ್ಟೇಟ್ ಇಲ್ಲ. ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಅಕ್ರಮ ಭೂ ಸ್ವಾಧೀನಕ್ಕೆ ನಮ್ಮ ವಿರೋದ ಇದೆ. ಕೆಲವರು ಭೂಮಿ ಕೊಡ್ತೀವಿ ಅಂತಿದ್ದಾರೆ. ಇದರ ಹಿಂದೆ ರಿಯಲ್ ಎಸ್ಟೇಟ್ ಕೈವಾಡ ಇದೆ ಎಂದು ಅವರು ಆರೋಪಿಸಿದರು.

 

Share This Article
error: Content is protected !!
";