ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಪಕ್ಷದ 18 ಶಾಸಕರ ಅಮಾನತು ರದ್ದುಗೊಳಿಸಿರುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯಪಾಲರನ್ನು ಭೇಟಿಯಾಗಿ ಶಾಸಕರ ಅಮಾನತು ಸಂಬಂಧ ಸೋಮವಾರ ದೂರು ನೀಡಿದ್ದರು. ಅಮಾನತು ತೆರವುಗೊಳಿಸಿ ಶಾಸಕರಿಗೆ ತಮ್ಮ ಅಧಿಕಾರ ಚಲಾಯಿಸಲು ಅನುವು ಮಾಡಿಕೊಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ನೀಡಿತ್ತು. ಇದೀಗ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ಗೆ ಪತ್ರ ಬರೆದು, 18 ಬಿಜೆಪಿ ಶಾಸಕರ ಅಮಾನತು ತೆರವುಗೊಳಿಸುವಂತೆ ಸಲಹೆ ನೀಡಿದ್ದಾರೆ.
ಉಭಯ ಸದನದ ಬಿಜೆಪಿ ವಿಪಕ್ಷ ನಾಯಕರು ನನ್ನನ್ನು ಭೇಟಿಯಾಗಿ 18 ಬಿಜೆಪಿ ಶಾಸಕರ ಅಮಾನತು ಸಂಬಂಧ ಮನವಿ ಪತ್ರ ಸಲ್ಲಿಸಿದ್ದಾರೆ. 18 ಶಾಸಕರ ಅಮಾನತು ಆದೇಶವನ್ನು ಮರುಪರಿಗಣಿಸುವ ಅವರ ಕೋರಿಕೆಯನ್ನು ಸ್ಪೀಕರ್ ಹಾಗೂ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಹಾಗೂ ಜನಪ್ರತಿನಿಧಿಯಾಗಿ ಅಮಾನತುಗೊಂಡ ಶಾಸಕರುಗಳು ತಮ್ಮ ಜವಾಬ್ದಾರಿ ಪುನರಾರಂಭಿಸಲು ಅನುವು ಮಾಡಿಕೊಡಲು ಬಿಜೆಪಿ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, 18 ಸದಸ್ಯರ ಅಮಾನತು ಆದೇಶ ರದ್ದತಿಗೆ ಅಗತ್ಯ ಕ್ರಮ ಕೈಗೊಳ್ಳಲು ಬಯಸುತ್ತೇನೆ.ಈ ಸಂಬಂಧ ಕೈಗೊಳ್ಳಲಾದ ಕ್ರಮವನ್ನು ನನ್ನ ಗಮನಕ್ಕೆ ತನ್ನಿ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.