ಸಾಮಾಜಿಕ ಪರಿವರ್ತನೆಯ ಸಾಧನೆಯೇ ಶ್ರೇಷ್ಠ: ಪ್ರೊ.ನಿರಂಜನ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬಂಡವಾಳ
ಹೂಡಿಕೆ ಮಾಡಿ ಉದ್ಯಮಿಯಾಗುವುದು ಮುಖ್ಯವಲ್ಲ. ಬಂಡವಾಳ ಇಲ್ಲದೆಯೇ ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ಸಮಾಜದ ಅಗತ್ಯಗಳನ್ನು ಈಡೇರಿಸಿ, ಪರಿವರ್ತನೆಗೆ ಕಾರಣವಾಗುವ ಸಾಧನೆಯೇ ಶ್ರೇಷ್ಠವಾದುದು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಸಮಾಜ ವಿಜ್ಞಾನ ಭವನ ಸಭಾಂಗಣ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ವಿಜ್ಞಾನ, ಪರಿಸರ ವಿಜ್ಞಾನ, ಉದ್ಯಮ, ಸಮಾಜ ಸೇವೆ ಮತ್ತಿತರ ಯಾವುದೇ ಕ್ಷೇತ್ರದಲ್ಲಿ ಕೌಶಲ್ಯಯುಕ್ತ, ಗುಣಮಟ್ಟದ ಸೇವೆ ನೀಡುವುದೂ ಸಾಧನೆಯಾಗಿದೆ. ಇಂಥ ಕ್ರಿಯಾಶೀಲತ್ವ ಕೌಶಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಶಿಕ್ಷಣವೆಂದರೆ ಪಠ್ಯದ ಓದಿಗಷ್ಟೇ ಸೀಮಿತವಲ್ಲ. ಅಂಕ ಗಳಿಕೆಯ ಪಠ್ಯಕ್ಕಿಂತ ಜ್ಞಾನಾರ್ಜನೆ, ಜೀವನ ಕೌಶಲ್ಯ ಮತ್ತು ವೃತ್ತಿ ಕೌಶಲ್ಯಗಳ ಕಲಿಕೆಯ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಚಿಂತನಾಕ್ರಮ ಬೇಕಾಗಿದೆ. ಯಾರೋ ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳದೇ ಪ್ರಶ್ನಿಸುವ, ತಾರ್ಕಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸುವ, ವಿವೇಚಿಸುವ, ಚಿಂತನಾಕ್ರಮಕ್ಕೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆದು ತೇರ್ಗಡೆ ಆಗುವ ವಿದ್ಯಾರ್ಥಿಗಿಂತ ಲಭ್ಯವಿರುವ ಸಂಪನ್ಮೂಲಗಳನ್ನೇ ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವುದು ಜಾಣತನ. ಶಿಕ್ಷಣದಲ್ಲಿ ಇಂಥ ಕೌಶಲ್ಯಗಳನ್ನು ಅಳವಡಿಸುವುದು ಅತ್ಯಗತ್ಯ. ಆದರೆ ಇಲ್ಲಿ ಪಠ್ಯಕ್ಕೆ ಆದ್ಯತೆ ನೀಡಿದಷ್ಟು ಕೌಶಲ್ಯಾಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪದವಿ ತರಗತಿಗಳಲ್ಲಿ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರ ಮತ್ತು ಪರಿಷತ್ತು ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಶೈಕ್ಷಣಿಕ ಕ್ರಮದಲ್ಲಿ ವೃತ್ತಿ ಕೌಶಲ್ಯ ಮತ್ತು ತಾಂತ್ರಿಕ ಕೌಶಲ್ಯದ ಕೊರತೆಯಿಂದ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಅದಾಗ್ಯೂ ಸಂಶೋಧನಾ ಪ್ರಬಂಧ ಪ್ರಕಟಣಾ ವಲಯದಲ್ಲಿ ಅಮೆರಿಕ (. ದಶಲಕ್ಷ), ಚೀನಾ (. ದಶಲಕ್ಷ), ಇಂಗ್ಲೆA (. ದಶಲಕ್ಷ) ನಂತರ ಭಾರತ (. ದಶಲಕ್ಷ) ನಾಲ್ಕನೇ ಸ್ಥಾನ ಪಡೆದಿದ್ದು ಗಮನಾರ್ಹ. ಇದು ಸಂಖ್ಯೆಗೆ ಸೀಮಿತವಾಗದೆ ಗುಣಮಟ್ಟದಲ್ಲೂ ಉನ್ನತಿ ಪಡೆಬೇಕಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಸ್ವಾತಂತ್ರ್ಯನಂತರದ ೭೫ ವರ್ಷದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಹೊತ್ತಿನ ಊಟಕ್ಕೂ ಕಷ್ಟ ಎದುರಿಸಿದ್ದ ದಿನಗಳಲ್ಲಿ ಹಸಿರು ಕ್ರಾಂತಿ ಹೊಸ ದೆಸೆಗೆ ಕಾರಣವಾಯಿತು. ಅಲ್ಲಿಂದ ಈಗ ತಳಿ ವಿಜ್ಞಾನವನ್ನೂ ದಾಟಿ ಕೃತಕ ಬುದ್ಧಿಮತ್ತೆಯ ಡಿಜಿಟಲ್ ಯುಗದಲ್ಲಿದ್ದೇವೆ. ಇದಕ್ಕೆ ದೇಶದ ವಿಜ್ಞಾನಿಗಳು, ತಂತ್ರಜ್ಞರು, ಸಂಶೋಧಕರ ಕೊಡುಗೆ ಅಪಾರವಾಗಿದೆ. ಕಡಿಮೆ ಬೆಲೆಯಲ್ಲಿ ಅತ್ಯುನ್ನತ ಗುಣಮಟ್ಟದ ಉತ್ಪಾದನೆ ನೀಡುವ ತಂತ್ರಜ್ಞಾನದತ್ತ, ರೋಗಮುಕ್ತ ಸಮಾಜ ನಿರ್ಮಾಣದತ್ತ ವೈದ್ಯಕೀಯ, ನಿರುದ್ಯೋಗಬಡತನ ನಿರ್ಮೂಲನೆಯತ್ತ ಸಮಾಜ ವಿಜ್ಞಾನ ಸಂಶೋಧನೆಗಳು ಬೇಕಾಗಿವೆ ಎಂದು ಹೇಳಿದರು.

ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳೆಲ್ಲವೂ ಮನುಷ್ಯನ ಉಜ್ವಲ ಎಳ್ಗೆಗಾಗಿಯೇ ಮೀಸಲಾಗಿರುತ್ತವೆ. ಸಂಶೋಧನೆಗಳು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪಿದಾಗ ಸಂಶೋಧನೆಯ ಉದ್ದೇಶ ಸಾರ್ಥಕತೆ ಪಡೆಯುತ್ತದೆ. ಹಿನ್ನೆಲೆಯಲ್ಲಿ ಸಂಶೋಧನೆಯಲ್ಲಿ ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ಸಂಶೋಧನೆಗೆ ಅವಕಾಶ ನೀಡಬೇಕು. ವಿಜ್ಞಾನದ ಜೊತೆಗೆ ಸಮಾಜ ವಿಜ್ಞಾನ, ಭಾಷಾ ವಿಜ್ಞಾನದ ಸಂಶೋಧಕರೂ ಒಗ್ಗೂಡಿ, ಚರ್ಚಿಸಿ ಸಂಶೋಧನೆ ನಡೆಸಿದಾಗ ಸಮಾಜದ ಅಗತ್ಯವನ್ನು ಪೂರೈಸಬಹುದು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಜೊತೆಗೂಡಿ ಕೆಲಸ ಮಾಡಿದಾಗ ವೈಜ್ಞಾನಿಕ ಉನ್ನತಿಗೆ ನೆರವಾಗಲಿದೆ. ವೈಯಕ್ತಿಕ ಹಿತಾಸಕ್ತಿಗಿಂತ ಸಾಂಸ್ಥಿಕ, ಸಾಂಘಿಕ ಮತ್ತು ಸಮುದಾಯ ಆಧಾರಿತ ಕಲಿಕೆ, ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಯಂತ್ರ, ತಂತ್ರಜ್ಞಾನ ಎಷ್ಟೇ ಪ್ರಬಲವಾಗಿ, ಸಮರ್ಥವಾಗಿ ಕಾರ್ಯ ನಿರ್ವಹಿಸಿದರೂ ಮನುಷ್ಯನ ಮನೋ ಯಾಂತ್ರಿಕ ಸಾಮರ್ಥ್ಯ ಬಲವಾಗಿರಬೇಕು. ಇಲ್ಲವಾದರೆ ಯಾವುದೇ ಸಂಶೋಧನೆಯೂ ಪ್ರಯೋಜನಕ್ಕೆ ಬರುವುದಿಲ್ಲ. ಮನುಷ್ಯ ಕೃತಕಬುದ್ಧಿಮತ್ತೆಯನ್ನೇ ಅವಲಂಬಿಸಿದರೆ ಸ್ವಂತ ಯೋಚನಾಶಕ್ತಿಯನ್ನು ಕಳೆದುಕೊಂಡು ಮುಂದೊAದು ದಿನ ಮಾನಸಿಕ ಅಸ್ವಸ್ಥನಾಗಬೇಕಾಗುತ್ತದೆ ಎಂದು ಅತಂಕ ವ್ಯಕ್ತಪಡಿಸಿದರು.
ಕುಲಸಚಿವ ಪ್ರೊ.ಆರ್.ಶಶಿಧರ ಸ್ವಾಗತಿಸಿದರು, ಪಿಎಂಇ ಮಂಡಳಿ ನಿರ್ದೇಶಕ ಪ್ರೊ.ಡಿ.ಜಿ.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆಶ್ವಿನಿ ಯಳ್ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಪ್ರಮೋದ ವಂದಿಸಿದರು.

 

Share This Article
error: Content is protected !!
";