ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಹಿಮಾಚಲ ಪ್ರದೇಶದಲ್ಲಿ ಆಡಳಿತಕ್ಕೇರಿದ್ದ ಹಿಮಾಚಲ ಕಾಂಗ್ರೆಸ್ ಸರ್ಕಾರ ಈಗ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದೆ ಎಂದು ಗ್ಯಾರೆಂಟಿ ಯೋಜನೆಗಳ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ಸರ್ಕಾರದ ಗ್ಯಾರಂಟಿಗಳು ಸರ್ಕಾರದ ಬೊಕ್ಕಸವನ್ನೇ ನುಂಗಿ ಹಾಕಿದ್ದು, ಹಿಮಾಚಲ ರಾಜ್ಯ ದಿವಾಳಿ ಅಂಚಿಗೆ ಬಂದು ನಿಂತಿದೆ. ಸರ್ಕಾರದ ಬೊಕ್ಕಸ ತುಂಬಿಸಲು ವಿದ್ಯುತ್‌ಸಬ್ಸಿಡಿಯನ್ನು ತ್ಯಜಿಸಿ ಎಂದು ಸ್ವತಃ ಕಾಂಗ್ರೆಸ್‌ಸಿಎಂ ಕರೆ ನೀಡುವ ಮೂಲಕ ಕಾಂಗ್ರೆಸ್ಸಿನ ಗ್ಯಾರಂಟಿಗಳು ಒಂದು ಐತಿಹಾಸಿಕ ಪ್ರಮಾದ ಎಂದು ಒಪ್ಪಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ರೀತಿಯಲ್ಲೇ ಕರ್ನಾಟಕವೂ ಮುಂದುವರೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲೂ ಆರ್ಥಿಕ ಸಂಕಷ್ಟ ಎದುರಾಗಲಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಈಗಾಗಲೇ ಸಾರಿಗೆ ಇಲಾಖೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರಿಗೆ ನಿಗಮಗಳನ್ನೇ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.
ಇದು ಕೇವಲ ಸಾರಿಗೆ ನಿಗಮದ ಕಥೆಯಲ್ಲ, ಸರ್ಕಾರದ ಎಲ್ಲಾ ಇಲಾಖೆಗಳೂ ಅಕ್ಷರಶಃ ದಿವಾಳಿಯಾಗುತ್ತಿವೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ನುಡಿದಂತೆ ನಡೆದಿದ್ದೇವೆ ಎನ್ನುತ್ತಲೇ ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿಕೊಳ್ಳುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಹಿಮಾಚಲದ ಮಾದರಿಯಲ್ಲೇ ಪಶ್ಚಾತ್ತಾಪ ಪಡಲಿದೆ. ದೇಶದಲ್ಲಿನ ಕಾಂಗ್ರೆಸ್ ಗ್ಯಾರಂಟಿಗಳು ಐತಿಹಾಸಿಕ ಪ್ರಮಾದ ಎಂದು ಇತಿಹಾಸ ಪುಸ್ತಕದಲ್ಲಿ ದಾಖಲಾಗುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಭವಿಷ್ಯ ನುಡಿದಿದೆ.