ಚಂದ್ರವಳ್ಳಿ ನ್ಯೂಸ್, ಹಾವೇರಿ:
ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟೆಯಾಗಿ ಚರ್ಚಿಸುತ್ತೇನೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲಾ ಅವರು ಭೇಟಿ ಮಾಡಲು ನನ್ನನ್ನು ಕರೆದಿದ್ದು ಹೋಗುತ್ತೇನೆ. ಭೇಟಿಯಾದ ಮೇಲೆ ಏನು ಅಂತ ಗೊತ್ತಾಗಲಿದೆ. ಸರ್ಕಾರದ ಸಾಧನೆ, ಸಂಘಟನೆ ಬಗ್ಗೆ ಚರ್ಚೆ ಮಾಡಬಹುದು. ವಿಧಾನಸಭಾ ಉಪಾಧ್ಯಕ್ಷನಾದ ಮೇಲೆ ನಾನು ಕೇಳಿದ ಅನುದಾನ ಕೊಟ್ಟಿದ್ದಾರೆ. 100ಕ್ಕೆ 100 ಕೊಡುವುದು ಆ ದೇವರಿಂದಲೂ ಸಾಧ್ಯವಿಲ್ಲ ಎಂದರು.
ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾರಿಗೆ, ಏನು ಕೊಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ?. ಶಾಸಕರಿದ್ದವರಿಗೆಲ್ಲಾ ಸಚಿವರಾಗುವ ಆಸೆ ಇರುತ್ತದೆ. ಕೊಟ್ಟರೆ ಯಾರೂ ಬೇಡ ಅನ್ನುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಸಚಿವ ಸ್ಥಾನ ಕೊಡುವುದಾಗಿ ಸರ್ಜೇವಾಲಾ ಹಿಂದೆ ಭರವಸೆ ನೀಡಿದ್ದರು. ಇಂದು ಭೇಟಿಯಾದಾಗ ಸಚಿವ ಸ್ಥಾನ ಕೇಳುತ್ತೇನೆ ಎಂದು ಲಮಾಣಿ ತಿಳಿಸಿದರು.
ಸಚಿವ ಸ್ಥಾನ ಕೇಳಲು ಏನು ರೊಕ್ಕ ಕೊಡಬೇಕಾ? ಎಂದು ಪ್ರಶ್ನಿಸಿದ ಅವರು, ನಮ್ಮ ಡಿಮ್ಯಾಂಡ್ ಇದೆ, ಕೊಡಿ ಅಂತ ಕೇಳುತ್ತೇನೆ. ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಸೂಚ್ಯವಾಗಿ ತಿಳಿಸಿದರು.