ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಗೆದ್ದ ಬಳಿಕ ಹಮ್ಮಿಕೊಂಡಿದ್ದ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.
ಈ ಘಟನೆ ಸಂಬಂಧಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮೃತಪಟ್ಟವರ ಪರವಾಗಿ ಸೇರಿದಂತೆ ಹಲವು ಮಂದಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಳನ್ನು ಪರಿಗಣಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠ ಮಂಗಳವಾರ ಕಲಾಪ ಪ್ರಾರಂಭಿಸುತ್ತಿದ್ದಂತೆ ಮೃತರ ಪರವಾಗಿ ಸೇರಿ ಕೆಲವು ವಕೀಲರು ಮಧ್ಯಂತರ ಅರ್ಜಿ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಉದ್ದೇಶಿಸಿ ಪೀಠವು ಈವರೆಗೂ ವಸ್ತುಸ್ಥಿತಿ ವರದಿಯನ್ನು ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿತು.
ಇದಕ್ಕೆ ಅಡ್ವೋಕೇಟ್ ಜನರಲ್ ಅವರು, ಘಟನೆ ಸಂಬಂಧ ನ್ಯಾಯಾಂಗ ತನಿಖೆ, ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ. ತನಿಖಾ ವರದಿ ಬರಬೇಕಾಗಿದೆ. ವರದಿ ಬರುವುದಕ್ಕೂ ಮುನ್ನ ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ತನಿಖೆಗೂ ಮುನ್ನ ಸರ್ಕಾರ ತೀರ್ಮಾನ ಮಾಡಿದೆ ಎಂಬ ಆರೋಪ ಬರಲಿದೆ. ಆದ್ದರಿಂದ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ನ್ಯಾಯ ಪೀಠವನ್ನು ಕೋರಿದರು.
ಅಡ್ವೋಕೇಟ್ ಜನರಲ್ ಅವರ ಕೋರಿಕೆಯನ್ನ ಪರಿಗಣಿಸಿದ ಪೀಠವು, ನಿಮ್ಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚನೆ ನೀಡಿತು. ಅಲ್ಲದೆ, ಸರ್ಕಾರ ಸಲ್ಲಿಸುವ ವರದಿಯನ್ನು ಪರಿಗಣಿಸಿ ಮಧ್ಯಂತರ ಅರ್ಜಿಗಳ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜೂನ್ 12ರಂದು ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿ ಮುಂದೂಡಿತು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ವಿಜಯೋತ್ಸವವನ್ನು ಯಾವಾಗ ಮತ್ತು ಯಾರು, ಯಾವ ರೀತಿಯಲ್ಲಿ ನಡೆಸಲು ನಿರ್ಧರಿಸಿದರು?. ಸಂಚಾರ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು?.
ಸಾರ್ವಜನಿಕರು, ಜನಸಂದಣಿ ನಿಯಂತ್ರಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು?. ಸ್ಥಳದಲ್ಲಿ ಯಾವ ವೈದ್ಯಕೀಯ ಮತ್ತು ಇತರ ಸೌಲಭ್ಯ ವ್ಯವಸ್ಥೆ ಮಾಡಲಾಗಿತ್ತು?. ಆಚರಣೆಗಳ ಸಮಯದಲ್ಲಿ ಎಷ್ಟು ಜನರು ಪಾಲ್ಗೊಳ್ಳಬಹುದು ಎಂಬ ಬಗ್ಗೆ ಮುಂಚಿತವಾಗಿ ಯಾವುದೇ ಮೌಲ್ಯಮಾಪನ ಮಾಡಲಾಗಿತ್ತೆ?. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿ ವೈದ್ಯಕೀಯ ತಜ್ಞರು ತಕ್ಷಣವೇ ಚಿಕಿತ್ಸೆ ನೀಡಿದ್ದಾರೆಯೇ? ಇಲ್ಲದಿದ್ದರೆ ಏಕೆ?.
ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಎಷ್ಟು ಸಮಯ ಹಿಡಿಯಿತು?. ಯಾವುದೇ ಕ್ರೀಡಾಕೂಟ ಮತ್ತು ಈ ರೀತಿಯ ಆಚರಣೆಗಳಲ್ಲಿ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಜನಸಂದಣಿ ನಿರ್ವಹಿಸಲು ಯಾವುದೇ ಎಸ್ಒಪಿ ರೂಪಿಸಲಾಗಿದೆಯೇ?. ಕಾರ್ಯಕ್ರಮ ಆಯೋಜಿಸಲು ಅನುಮತಿ ಕೋರಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಪೀಠ ಸೂಚನೆ ನೀಡಿತ್ತು.