ಕರ್ನಾಟಕದ ಶ್ರೀಗಂಧ-ವಿಶ್ವಕ್ಕೆಲ್ಲಾ ಸೌಗಂಧ
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಾದ್ಯಂತ ಭೂ ಸ್ವಾಧೀನ ಪ್ರಕರಣಗಳಲ್ಲಿ ಶ್ರೀಗಂಧದ ಮರಗಳು ಸ್ವಾಧೀನವಾದಾಗ ಮೌಲ್ಯ ನಿರ್ಧಾರಣೆಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ತೀರ್ಪಿನಲ್ಲಿ ಶ್ರೀಗಂಧದ ನಾಡೆಂದು ಪ್ರಖ್ಯಾತವಾಗಿರುವ ರಾಜ್ಯದಲ್ಲಿ ಶ್ರೀಗಂಧ ಮರಗಳ ಮೌಲ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಮಾರ್ಗಸೂಚಿಗಳನ್ನೇ ರೂಪಿಸಿಲ್ಲವೆಂದು ಕೋರ್ಟ್ ವಿಷಾದಿಸಿದೆ.
ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಅರಣ್ಯ ಇಲಾಖೆಯು ಇನ್ನೂ ಬ್ರಿಟಿಷ್ ಕಾಲದ (ಓಬಿರಾಯನ ಕಾಲದ) ಗೊಡ್ಡು ಅರಣ್ಯ ನಿಯಮಗಳನ್ನೇ ಅನುಸರಿಸುತ್ತಾ ರೈತರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಸ್ವಾಧೀನವಾದಾಗ ಅತ್ಯಂತ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಳೆದುಕೊಂಡಾಗ, ಪರಿಹಾರಾರ್ಥವಾಗಿ ನಿಗದಿಪಡಿಸಿರುವ ನಿಕೃಷ್ಟ ಮೊತ್ತವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡರವರ ಪೀಠ ರದ್ದುಗೊಳಿಸಿ ಆದೇಶಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೆ.ಆರ್ ಪ್ರತಾಪ್ ಕುಮಾರ್, ಟಿ.ಎನ್ ವಿಶುಕುಮಾರ್, ಶ್ರೀಮತಿ ಪಲ್ಲವಿ ಮತ್ತು ಇತರೆ ಭೂ ಮಾಲೀಕ ರೈತರು, ತರೀಕೆರೆ, ಶಾಂತಮ್ಮ, ಶ್ರೀನಿವಾಸ ರೆಡ್ಡಿ, ಜೋಡಿಕೊತ್ತಪಲ್ಲಿ ಶ್ರೀನಿವಾಸಪುರ ರವರುಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಇತ್ಯರ್ಥಪಡಿಸಿದ ನ್ಯಾಯಾಲಯವು ಅರಣ್ಯ ಇಲಾಖೆಗೆ ದರ ನಿಗದಿ ಮಾಡುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಂಶಗಳ ಕುರಿತು ಮಹತ್ವದ ನಿರ್ದೇಶನಗಳನ್ನು ಇದೇ ಸಂದರ್ಭದಲ್ಲಿ ನೀಡಿ ಆದೇಶಿಸಿದೆ.
ಅರಣ್ಯ ಇಲಾಖೆಯು ಭೂ ಸ್ವಾಧೀನ ಪ್ರಕರಣಗಳಲ್ಲಿ ಶ್ರೀಗಂಧ ಮರಗಳ ಕಡಿತವಾದಾಗ ತಗುಲಿದ ವ್ಯವಸಾಯದ ವೆಚ್ಚವನ್ನು ಮಾತ್ರ ಕೆಳಕಂಡಂತೆ ನಿಗದಿಪಡಿಸಿತ್ತು. ನ್ಯಾಯಾಲಯವು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಈ ಸಂಬಂಧವಾಗಿ ಅಂತಿಮವಾದ ವರದಿಯನ್ನು ನೀಡುವ ಮೊದಲೇ, ಅರಣ್ಯ ಇಲಾಖೆಯ ಅಧಿಕಾರಿಗಳು ಆತುರಾತುರವಾಗಿ ಅಪೂರ್ಣವಾದ ಅಂಕಿ ಅಂಶಗಳ ಮೇಲೆ ಹಾಗೂ ಅವೈಜ್ಞಾನಿಕವಾಗಿ ನಿಗದಿಪಡಿಸಿದ ಪರಿಹಾರದ ಮೊತ್ತವನ್ನು ರದ್ದುಪಡಿಸಿದ ಕೋರ್ಟ್, ಕೆಳಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.
It is rather sad that Karnataka, which is referred to as the “Sandalwood Land” (“ಶ್ರೀಗಂಧದ ನಾಡು”) does not have any scientifically documented method of valuing sandalwood trees” (para 75 of judgement in W P No.16604/2022 LA – RES & OTHERS)
ಅರಣ್ಯ ಇಲಾಖೆ ನಿಗದಿ ಮಾಡಿರುವ ದರಗಳು ಅವೈಜ್ಞಾನಿಕವೆಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಶ್ರೀಗಂಧ ಮರಗಳ ಮೌಲ್ಯ ನಿರ್ಧರಿಸಲು ಕೆಳಕಂಡ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಮಾನದಂಡಗಳನ್ನು ರೂಪಿಸಲು ನಿರ್ದೇಶಿಸಿದೆ.
“ಭೂ ಆರ್ಜನೆಯಲ್ಲಿ ಯೋಗ್ಯ ಪರಿಹಾರ ಮತ್ತು ಪಾರದರ್ಶಕತೆ ಹಾಗೂ ಪುನರ್ವಸತಿ ಮತ್ತು ಪುನರ್ವ್ಯವಸ್ಥೆಗೆ ಅಧಿಕಾರ ಅಧಿನಿಯಮ 2013″ರ ಕಂಡಿಕೆ 26, 27, 28, 29ರಡಿ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.
ಭೂ ಸ್ವಾಧೀನ ಕಾಯಿದೆಯ ಕಂಡಿಕೆ 26ರಂತೆ, ಸ್ವಾಧೀನವಾಗುವ ಭೂಮಿಯ ಮಾರುಕಟ್ಟೆ ದರ ನಿಗದಿಪಡಿಸಬೇಕು.
ಕಂಡಿಕೆ 27ರಂತೆ, ಸ್ವಾಧೀನವಾಗುವ ಭೂಮಿಗೆ ಹೊಂದಿಕೊಂಡಿರುವ ಎಲ್ಲಾ ಆಸ್ತಿಗಳ ಪರಿಹಾರವನ್ನು ಮಾರುಕಟ್ಟೆ ದರದಲ್ಲಿ ಲೆಕ್ಕ ಹಾಕಬೇಕು.
ಕಂಡಿಕೆ 28ರಂತೆ ಐತೀರ್ಪು ಅಥವಾ ಅವಾರ್ಡ್ ನಿರ್ಧರಿಸಲು ಕಾಯಿದೆಯಡಿ ನಿಗದಿಪಡಿಸಿರುವ ಮಾನದಂಡಗಳನ್ನು ಅನುಸರಿಸಬೇಕು.
ಕಂಡಿಕೆ 29ರಂತೆ, ಮರಗಳ ಮೌಲ್ಯ ನಿರ್ಧರಿಸಲು, ತಜ್ಞರು ಮತ್ತು ಪರಿಣಿತರ ಸೇವೆ ಬಳಸಿಕೊಳ್ಳಬೇಕು.
ಕಂಡಿಕೆ 30ರಂತೆ ಭೂ ಪರಿಹಾರದ ಜೊತೆಗೆ ಶೇ 100ರಷ್ಟು ಸಾಂತ್ವನ ಪರಿಹಾರ ಸೊಲಾಟಿಯಂ(solatium) ವಿಧಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಭೂಮಿಯ ಒಡೆಯನಿಗೆ ಆಗುವ ವರಮಾನ ನಷ್ಟವನ್ನು ಸಮಾನವಾಗಿಯೂ, ನ್ಯಾಯಯುತವಾಗಿಯೂ ಮತ್ತು ಸಂತ್ರಸ್ತ ಕುಟುಂಬಸ್ಥರಿಗೆ ಅನುಕೂಲಕರವಾಗಿರುವಂತೆ ನಿಗದಿಪಡಿಸಬೇಕು.
ಭೂ ಸ್ವಾಧೀನವಾಗುವ ಭೂಮಿಯ ಮಾರುಕಟ್ಟೆ ದರ ನಿಗದಿಪಡಿಸುವ ಜೊತೆಗೆ ಭೂಮಿಯ ಮೇಲಿರುವ ಮರಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಬೇಕು. ತತ್ಪರಿಣಾಮವಾಗಿ ಆಗುವ ವರಮಾನದ ನಷ್ಟವನ್ನು ಮತ್ತು ಆಘಾತವನ್ನು ಸಹ ಪರಿಗಣಿಸಬೇಕು.
ಭೂಮಿ ಕಳೆದುಕೊಂಡವರಿಗೆ ವಿಶೇಷವಾಗಿ ಮಾಲ್ಕಿ ಪರಿಹಾರವು ಸಮಾನವಾಗಿಯೂ, ನ್ಯಾಯಯುತವಾಗಿಯೂ ಮತ್ತು ಪ್ರಯೋಜನಕಾರಿಯಾಗಿಯೂ ಇರುವಂತೆ ನಿಗದಿಪಡಿಸಬೇಕು.
ಶ್ರೀಗಂಧ ಮರಗಳಿಗೂ ಹಣ್ಣು ಬಿಡುವ ಮರಗಳ ರೀತಿಯಲ್ಲೇ ಭವಿಷ್ಯದಲ್ಲಿ ಬರುವ ಆದಾಯವನ್ನು ಲೆಕ್ಕ ಹಾಕಬೇಕು. ಕೇವಲ ಸಸಿಗಳನ್ನು ಬೆಳೆಸಿ ಮರ ಬೆಳೆಯುವ ತನಕ ಆಗುವ ವೆಚ್ಚವನ್ನು ಪರಿಗಣಿಸಬಾರದೆಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಎರಡು ಸಮಿತಿಗಳನ್ನು ರಚಿಸಿ, ಕೇವಲ ಸಸಿಗಳನ್ನು ಬೆಳೆಯುವ (Sanctioned Scheduled Rate) ವೆಚ್ಚವನ್ನು ನಿಗದಿಪಡಿಸಿರುವುದು ಅವೈಜ್ಞಾನಿಕ ಎಂದು ತೀರ್ಪಿನಲ್ಲಿ ತಿಳಿಸಿದೆ. ಇದೇ ಸಂಧರ್ಭದಲ್ಲಿ 2015ರಲ್ಲಿ ಶ್ರೀಗಂಧ ಮರಗಳಿಗೆ ಅನ್ವಯಿಸಬಹುದಾದ ಶ್ರೀಗಂಧ ಮಾರುಕಟ್ಟೆ ಬೆಲೆಯ ಪರಿಹಾರ ದರ ನಿಗದಿ ಸೂತ್ರ, ವಿವಿಧ ಮಾದರಿಯ ಶ್ರೀಗಂಧ ಸಸಿಗಳ ನೆಡುವಿಕೆ ವಿಧಾನಗಳನ್ನೂ ವಿಶ್ಲೇಷಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ 2017ರ ನಂತರದ ಭೂ ಸ್ವಾಧೀನ ಪ್ರಕರಣಗಳಿಗೆ ವೈಜ್ಞಾನಿಕವಾಗಿ ಮಾರ್ಗಸೂಚಿಗಳನ್ನು ರಚಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ.
ಬಾಕ್ಸ್-
ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಸಹ (ರೂ.928/-ರಂತೆ) ಮೌಲ್ಯ ನಿರ್ಧರಣೆ ಮಾಡಿದೆ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಲಿಂಗಣಾಪುರ ಗ್ರಾಮದ ಸ ನಂ.106/1 ಮತ್ತು ಸ ನಂ.112/4 ರಲ್ಲಿ ಆರ್ ಸಾಗರ್ ಬಿನ್ ರಾಜಣ್ಣರವರು ಕಾವೇರಿ ನೀರಾವರಿ ನಿಗಮದ ಕಾಮಗಾರಿಯಲ್ಲಿ ಕಡಿದಿರುವ 3 ವರ್ಷದ 209 ಶ್ರೀಗಂಧ ಮರಗಳಿಗೆ 3500 ರೂ. ರಂತೆ 7,31,500 ರೂ.ಗಳನ್ನು ಪರಿಹಾರವಾಗಿ ದಿನಾಂಕ 31.03.2022ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಈ ಪರಿಹಾರದ ಮೊತ್ತ ಪಾವತಿಸಲು ಯಾವುದೇ ಸರ್ಕಾರದ ಆದೇಶವಿರುವುದಿಲ್ಲ. ಈ ಮೇಲೆ ಕೋಷ್ಟಕದಲ್ಲಿ ತಿಳಿಸಿರುವ ದಿನಾಂಕ 10.02.2022ರ ಆದೇಶದಲ್ಲಿ ಅರಣ್ಯ ಇಲಾಖೆಯ ಆದೇಶದ ಪ್ರಕಾರ 3 ವರ್ಷದ ಮರಕ್ಕೆ 596 ರೂ. ಪಾವತಿಸಬೇಕಿತ್ತು.
ಆದರೆ ನಿಗದಿತ ಮೊತ್ತಕ್ಕಿಂತ ಹೆಚ್ಚಿಗೆ ಪಾವತಿಸಿರುವುದಕ್ಕೆ ಅರಣ್ಯ ಇಲಾಖೆಗೆ ಸ್ಪಷ್ಟೀಕರಣ ಕೋರಲಾಗಿದ್ದು ಇದುವರೆವಿಗೂ ಉತ್ತರಿಸಿರುವುದಿಲ್ಲ. ಈ ಪ್ರಕರಣದಲ್ಲಿ ಅವ್ಯವಹಾರವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನಸೋ ಇಚ್ಛೆ ಪರಿಹಾರ ನೀಡಲಾಗಿದೆ. ಒಬ್ಬೊಬ್ಬ ರೈತರಿಗೆ ಒಂದೊಂದು ರೀತಿಯಾಗಿ ಪರಿಹಾರ ಮೊತ್ತ ನಿಗದಿಪಡಿಸಿರುವುದು ಕಂಡುಬಂದಿದೆ. ಈ ವಿಷಯವನ್ನು ವಿವರವಾದ ತನಿಖೆಗೆ ಒಳಪಡಿಸಬೇಕೆಂದು ಸಂಘದ ಆಗ್ರಹವಾಗಿದೆ. ಸಿಬಿಐ ತನಿಖೆ ನಡೆಸಿದರೆ ವಿವಿಧ ಇಲಾಖೆಯ / ಸಂಸ್ಥೆಗಳ ಅಧಿಕಾರಿಗಳು ನಡೆಸಿರುವ ರೈತ ವಿರೋಧಿ ಕ್ರಮಗಳು ಬೆಳಕಿಗೆ ಬರುತ್ತವೆಂದು ಸರ್ಕಾರಕ್ಕೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ.ಅಮರನಾರಾಯಣರವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ವಿಷಯವನ್ನು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಅರಣ್ಯ ಇಲಾಖೆಗೆ 2021ರಿಂದಲೂ ಮನವರಿಕೆ ಮಾಡಿಕೊಡುತ್ತಾ ಬಂದಿದ್ದು, ಅಪ್ರಬುದ್ಧ ಹಿರಿಯ ಅರಣ್ಯ ಅಧಿಕಾರಿಗಳ ಏಕಸಾಮ್ಯದ ನಿರ್ಧಾರಗಳಿಗೆ ಉಚ್ಚ ನ್ಯಾಯಾಲಯವು ಚಾಟಿ ಬೀಸಿದೆ. ಶ್ರೀಗಂಧ ಬೆಳೆಗಾರರ ಪರವಾಗಿ ಹೋರಾಟ ನಡೆಸಿದ ಸಂಘದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರಾದ ಕೆ ಅಮರನಾರಾಯಣರವರ ಸತತ ಪರಿಶ್ರಮ ಮತ್ತು ಅನುಸರಣಾ ಕಾರ್ಯಗಳು ಶ್ರೀಗಂಧ ಬೆಳೆಗಾರರಿಗೆ ಅರಣ್ಯ ಇಲಾಖೆಯ ಉಸಿರು ಕಟ್ಟಿದ ವಾತಾವರಣದಿಂದ ಹೊರಗೆ ಬಂದಂತಾಗಿದೆ ಎಂದು ಶ್ರಿಗಂಧ ಬೆಳೆಗಾರರು ಜಿ.ಸಿ.ಕಾಂತರಾಜ್, ರವಿಕುಮಾರ್ ಸೇರಿದಂತೆ ಮತ್ತಿತರರು ತಿಳಿಸಿದ್ದಾರೆ.
ಕೃಷಿ ಭೂಮಿಯ ಮೇಲೆ ಬೆಳೆಯುವ ಶ್ರೀಗಂಧ ಮರಗಳ ಮೌಲ್ಯ ನಿರ್ಧಾರಣೆಯನ್ನು ಪರಿಣತಿ ಇರುವ ತೋಟಗಾರಿಕೆ ಇಲಾಖೆಗೆ ವಹಿಸುವಂತೆ ಸಂಘವು ಅನೇಕ ಬಾರಿ ಮನವಿ ಮಾಡಿದ್ದರೂ, ಭೂ ಸ್ವಾಧೀನ ವಿಚಾರಗಳಲ್ಲಿ ಗಂಧ ಗಾಳಿ ಇಲ್ಲದ, ಅಪ್ರಬುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಹಿಸಬಾರದೆಂದು ತಿಳಿಸಿದ್ದರೂ, ಅಕ್ರಮ ಆದೇಶಗಳನ್ನು ಹೊರಡಿಸಿ ನೂರಾರು ರೈತರಿಗೆ ಅನ್ಯಾಯ ಮಾಡಿರುತ್ತಾರೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕಂಟಕರಾಗಿರುತ್ತಾರೆಂದು ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ ಅಮರನಾರಾಯಣರವರು ಆಪಾದಿಸಿದ್ದಾರೆ.
ಶ್ರಿಗಂಧ ಮರಗಳ ಮೌಲ್ಯವನ್ನು ಮನಸೋಇಚ್ಛೆ ನಿಗದಿಪಡಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಯು ಪ್ರಶ್ನಾರ್ಹವಾಗಿದೆ. ಈ ವಿಷಯವನ್ನು ಆಳವಾಗಿ ಪರಿಶೀಲಿಸಿರುವ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ನಾನಾ ರೀತಿಯಲ್ಲಿ ರೈತರನ್ನು ವಂಚಿಸಿರುವ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪವರ್ ಗ್ರಿಡ್ ಕಾರ್ಪೋರೇಶನ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕಾರಿಗಳ ಅಕ್ರಮಗಳನ್ನು ಅರಣ್ಯ ಸಚಿವರ ಗಮನಕ್ಕೆ ಈಗಾಗಲೇ ತರಲಾಗಿದೆ ಹಾಗೂ ಈ ವಿಷಯವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಂಘವು ಸರ್ಕಾರವನ್ನು ಆಗ್ರಹಿಸಿದೆ. ಅರಣ್ಯ ಸಚಿವರ ದಿವ್ಯಮೌನವು ಶ್ರೀಗಂಧ ಬೆಳೆಗಾರರಲ್ಲಿ ಅನುಮಾನ ಹಾಗೂ ಆತಂಕ ಮೂಡಿಸಿದೆ.
ಶ್ರೀಗಂಧ ಬೆಳೆಗಾರರು ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಂಘದ ಈ ಮೇಲ್ [email protected] ಗೆ ಹಾಗೂ ವಾಟ್ಸಪ್ಪ್ ದೂರವಾಣಿ ಸಂಖ್ಯೆ 9448138668 ಗೂ ಮಾಹಿತಿಗಳನ್ನು ಕಳುಹಿಸಬಹುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಛಾಯಾ ರವರು ಮನವಿ ಮಾಡಿದ್ದಾರೆ.