ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೀವ ವಿಮಾ ಪಾಲಿಸಿಗಳ ಪರಿಹಾರದ ಮೊತ್ತಕ್ಕಾಗಿ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ್ದಲ್ಲಿ ವಿಮೆಗೆ ನಾಮನಿರ್ದೇಶಿತರಾಗಿರುವವರಿಗೆ (ನಾಮಿನಿ) ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
ತಮ್ಮ ಮಗನ ವಿಮೆಗೆ ನಾಮನಿರ್ದೇಶಿತರಾಗಿದ್ದ ನೀಲವ್ವ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಧಾರವಾಡ ಪೀಠವು ಈ ಮಹತ್ವದ ಆದೇಶ ನೀಡಿದೆ.
ನಾಮನಿರ್ದೇಶನಗಳನ್ನು ನಿಯಂತ್ರಿಸುವ ವಿಮಾ ಕಾಯಿದೆ-1938ರ ಸೆಕ್ಷನ್ 39 ವೈಯಕ್ತಿಕ ಉತ್ತರಾಧಿಕಾರ ಕಾನೂನಾಗಿರುವ ಹಿಂದೂ ಉತ್ತರಾಧಿಕಾರ ಕಾಯಿದೆ-1956ನ್ನು ಅತಿಕ್ರಮಣ ಮಾಡುವುದಿಲ್ಲ. ಹೀಗಾಗಿ ವಿಮೆಯಿಂದ ಬರುವ ಪ್ರಯೋಜನ(ಪರಿಹಾರ) ನಾಮನಿರ್ದೇಶಿತರೊಂದಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳು ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಆದರೆ, ಕಾನೂನುಬದ್ಧ ಉತ್ತರಾಧಿಕಾರಿಗಳು ವಿಮೆಯ ಪರಿಹಾರಕ್ಕಾಗಿ ಮನವಿ ಸಲ್ಲಿಸದಿದ್ದರೆ ಮಾತ್ರ ನಾಮನಿರ್ದೇಶಿತರು ವಿಮೆಯ ಸಂಪೂರ್ಣ ಹಕ್ಕು ಹೊಂದಿರುತ್ತಾರೆ ಎಂದು ವೇಳೆ ಹೈಕೋರ್ಟ್ ತಿಳಿಸಿದೆ.
ಅರ್ಜಿ ಸಲ್ಲಿಸಿದಲ್ಲಿ ನಾಮನಿರ್ದೇಶಿತರಿಗೆ ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ. ಕಾನೂನುಬದ್ಧ ಉತ್ತರಾಧಿಕಾರಿಗಳು ಮನವಿ ಮಾಡಿದಲ್ಲಿ ನಾಮನಿರ್ದೇಶಿತರ ಹಕ್ಕು ಉತ್ತರಾಧಿಕಾರಿಗಳ ಹಕ್ಕನ್ನು ನಿಯಂತ್ರಿಸುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಹೈಕೋರ್ಟ್ ನ್ಯಾಯಪೀಠವು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಆದೇಶದಲ್ಲಿ ಉಲ್ಲೇಖಿಸಿ ಯಾವುದೇ ವ್ಯಕ್ತಿಯ ವಿಮೆಗೆ ತಾಯಿಯನ್ನು ನಾಮನಿರ್ದೇಶನ ಮಾಡಿ ಮೃತಪಟ್ಟಲ್ಲಿ ಮೃತರ ಪತ್ನಿ, ಮಗು ಮತ್ತು ತಾಯಿ ಪರಿಹಾರವನ್ನು ಮೂರನೇ ಒಂದು ಭಾಗದಂತೆ ಹಂಚಿಕೊಳ್ಳಬೇಕು ಎಂದಿದೆ.
ಅಲ್ಲದೆ, ವಿಮಾ ಪರಿಹಾರಗಳನ್ನು ಪಡೆಯುವ ಸಂಬಂಧ ನಾಮನಿರ್ದೇಶಿತರು ಹಾಗೂ ಉತ್ತರಾಧಿಕಾರಿಗಳಲ್ಲಿನ ವ್ಯತ್ಯಾಸ ಕುರಿತಂತೆ ಭಾರತೀಯ ಕಾನೂನು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಈ ಅಂಶಗಳನ್ನು ಸಂಸತ್ತು ಕಾನೂನಾಗಿ ಮಾಡಿಲ್ಲ. ಹೀಗಾಗಿ ನಾಮನಿರ್ದೇಶಿತರನ್ನು ಸ್ವಯಂ ಚಾಲಿತ ಪ್ರಯೋಜನಾಕಾರಿ ನಾಮನಿರ್ದೇಶಿತರು ಎಂಬುದಾಗಿ ಪರಿಗಣಿಸುವಂತೆ ಆದೇಶಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ:
19 ಲಕ್ಷ ಮತ್ತು 2 ಲಕ್ಷ ರೂ. ಮೌಲ್ಯಗಳ ಎರಡು ಜೀವ ವಿಮಾ ಪಾಲಿಸಿಗಳನ್ನು ರವಿ ಸೋಮನಕಟ್ಟಿ ಮಾಡಿಸಿಕೊಂಡಿದ್ದರು. ಈ ವಿಮೆಗಳಿಗೆ ಅವರ ತಾಯಿಯನ್ನು ನಾಮನಿರ್ದೇಶಿತರನ್ನಾಗಿ ಮಾಡಿದ್ದರು. ಮದುವೆಯಾಗಿ ಮಗು ಜನಿಸಿದ್ದರೂ, ಸೋಮನಕಟ್ಟಿ ನಾಮನಿರ್ದೇಶನದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈ ನಡುವೆ 2019ರ ಡಿಸೆಂಬರ್ 20ರಂದು ರವಿ ಮೃತಪಟ್ಟಿದ್ದರು. ಬಳಿಕ ಪತ್ನಿ ಹಾಗೂ ಮಗ ಇಬ್ಬರೂ ಸೇರಿ ವಿಮೆಗೆ ನಾಮನಿರ್ದೇಶಿತರಾಗಿರುವ ಮೃತರ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿ ವಿಮಾ ಮೊತ್ತದಲ್ಲಿ ಪಾಲು ನೀಡುವಂತೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ವಿಮೆಯ ಸಂಪೂರ್ಣ ಮೊತ್ತ ನಾಮನಿರ್ದೇಶಿತರ ಹಕ್ಕೆಂಬ ರವಿ ತಾಯಿಯ ವಾದವನ್ನು ತಿರಸ್ಕರಿಸಿ, ತಾಯಿ, ಪತ್ನಿ ಹಾಗೂ ಮಗ ಮೂರನೇ ಒಂದು ಭಾಗ ಪಾಲು ಪಡೆಯುವುದಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಾಯಿ ನೀಲವ್ವ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಸ್ಮರಿಸಬಹುದಾಗಿದೆ.

