ಸಿಎಂ ಕುಟುಂಬ ನಿರಪರಾಧಿ ಎಂದು ಹೈಕೋರ್ಟ್ ಹೇಳಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾ ಆಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಪರಾಧಿ ಎಂಬುದಾಗಿ ಹೈಕೋರ್ಟ್ ಹೇಳಿಲ್ಲ
ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಹೈಕೋರ್ಟ್​​​ನಲ್ಲಿ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದರು. ಆ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ ಎಂದು ವಿಜಯೇಂದ್ರ ತಿಳಿಸಿದರು.

ಸಿಬಿಐ ತನಿಖೆಗೆ ಮುಡಾ ಪ್ರಕರಣ ಕೊಡುವುದಿಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಅವರನ್ನು ಆರೋಪಮುಕ್ತರನ್ನಾಗಿ ಹೈಕೋರ್ಟ್ ಮಾಡಿಲ್ಲ. ಇದರಿಂದ ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಸಿಎಂ ಕುಟುಂಬ ಭಾಗಿಯಾಗಿರುವ ಕುರಿತ ಬಿಜೆಪಿ ಹೋರಾಟ ಮತ್ತು ಪಾದಯಾತ್ರೆಗೆ ಹಿನ್ನಡೆ ಆಗಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಮುಡಾದಲ್ಲಿ ನಡೆದಿರುವ ಅಕ್ರಮ, ಅವ್ಯವಹಾರ, ಹಗರಣ ಕುರಿತು ಲೋಕಾಯುಕ್ತ ಮತ್ತು ಇ.ಡಿ. ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮುಂದೇನಾಗುತ್ತದೆ ಕಾದು ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಸಿಎಂ ಕುಟುಂಬದವರು ನಿರಪರಾಧಿಗಳೆಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆಯೇ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ಮುಡಾ ಹಗರಣದಲ್ಲಿ ಸಿಎಂ ಕುಟುಂಬ ಭಾಗಿ ಆಗಿರುವುದು ಮತ್ತು ಸಾವಿರಾರು ಕೋಟಿ ರೂಪಾಯಿ ಲೂಟಿ ಆಗಿರುವುದನ್ನು ತಿಳಿಸಿ ನಾವು ಹೋರಾಟ ಮಾಡಿದ್ದೆವು. ನಮ್ಮ ಆರೋಪಕ್ಕೆ ಇವತ್ತಿಗೂ ನಾವು ಬದ್ಧರಾಗಿದ್ದೇವೆ ಎಂದು ತಮ್ಮ ಹೋರಾಟವನ್ನು ವಿಜಯೇಂದ್ರ ಸಮರ್ಥಿಸಿಕೊಂಡರು.

ಮುಡಾ ಹಗರಣ ಕುರಿತು ತನಿಖೆ ಮಾಡುತ್ತಿರುವ ಲೋಕಾಯುಕ್ತ ತನಿಖಾ ವರದಿ ಬಂದ ಬಳಿಕ ನಾವು ಮಾತನಾಡುತ್ತೇವೆ. ಲೋಕಾಯುಕ್ತ ವರದಿಯನ್ನು ಕಾದು ನೋಡೋಣ ಎಂದು ವಿಜಯೇಂದ್ರ ತಿಳಿಸಿದರು.

ಕೋರ್ಟ್​​ ಸಮನ್ಸ್ ರದ್ದು:
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಕೇಸಿನಲ್ಲಿ ಕೆಳಹಂತದ ಕೋರ್ಟಿನ ಸಮನ್ಸ್ ಅನ್ನು ರಾಜ್ಯ ಹೈಕೋರ್ಟ್ ಬದಿಗಿರಿಸಿದೆ. ರಾಜ್ಯ ಹೈಕೋರ್ಟ್‍ನಲ್ಲಿ ಈ ಕುರಿತು ಬಹಳ ದಿನ ವಾದ
, ಪ್ರತಿವಾದ ನಡೆದಿದೆ. ಅದರ ಆಧಾರದಲ್ಲಿ ನಮ್ಮ ಅರ್ಜಿಯನ್ನೂ ಪುರಸ್ಕರಿಸಿ, ಕೆಳಹಂತದ ಕೋರ್ಟಿನ ಸಮನ್ಸ್ ರದ್ದು ಮಾಡಿ ಮರು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಿದೆ ಎಂದು ವಿಜಯೇಂದ್ರ ತಿಳಿಸಿದರು.

Share This Article
error: Content is protected !!
";