ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸೋಮವಾರದಿಂದ ಪ್ರಾರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿರುವ ಮನವಿಗೆ ಸಂಬಂಧಿಸಿದಂತೆ ಸೆ.23 ರಂದು ಮಂಗಳವಾರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ. ಮಧ್ಯಂತರ ಆದೇಶದ ಕುರಿತಂತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಾತಿ ಸಮೀಕ್ಷೆ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಗುರುತಿಸುವುದಾಗಿದೆ. ಸರ್ಕಾರದ ಈ ಕ್ರಮ ಸಂವಿಧಾನದ 342(A)ಗೆ ತದ್ವಿರುದ್ಧವಾಗಿದೆ.
ಈ ಹಿಂದೆ ನಡೆದಿರುವ ಸಮೀಕ್ಷೆಗೆ ಸಂಬಂಧಿಸಿದಂತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೊಂದು ಸಮೀಕ್ಷೆ ನಡೆಸುತ್ತಿದೆ. ಅಲ್ಲದೆ, ಎಲ್ಲ ಜನರ ಆಧಾರ್ ದತ್ತಾಂಶವನ್ನು ಲಿಂಕ್ ಮಾಡಲಾಗುತ್ತಿದೆ. ಇದು ಆಧಾರ್ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ವಾದ ಮಂಡಿಸಿದರು.
ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಇದಕ್ಕೆ ಆಕ್ಷೇಪಿಸಿ, ಸರ್ಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಅವಕಾಶವಿದೆ. ದೇಶದ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಸಮೀಕ್ಷೆಗೆ ನ್ಯಾಯಾಲಯಗಳು ತಡೆ ನೀಡಿಲ್ಲ. ಹಾಗಾಗಿ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿ ಕೋರಿಕೊಂಡರು.

