ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಬೆಟ್ಟಿಂಗ್ ಆರೋಪ ಸೇರಿದಂತೆ ಆನ್ಲೈನ್ ಮತ್ತು ಆಫ್ಲೈನ್ ಪ್ರಕರಣ ಸಂಬಂಧ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಶಾಸಕರ ಪತ್ನಿ ಡಿ.ಆರ್.ಚೈತ್ರಾ ಅವರ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದೆ.
ಇಡಿ ಅಧಿಕಾರಿಗಳು ಪಿಎಂಎಲ್ ಕಾಯ್ದೆಯಡಿ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿರುವ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಪತ್ನಿ ಚೈತ್ರಾ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಹೈಕೋರ್ಟ್ ನ್ಯಾಯ ಪೀಠವು ಅದರ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಇಡಿ ಪರ ವಾದ: ಶಾಸಕ ವೀರೇಂದ್ರ ಅವರನ್ನು ಬಂಧಿಸಿರುವ ಕ್ರಮವನ್ನು ವಿಚಾರಣೆ ವೇಳೆ ಸಮರ್ಥಿಸಿಕೊಂಡ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ಜನರಲ್ ಅರವಿಂದ ಕಾಮತ್, ಅರ್ಜಿದಾರರ ಪತಿಯ ವಿರುದ್ಧ 30 ಸಾವಿರ ರೂ.ಗಳನ್ನು ವಂಚನೆ ಮಾಡಿರುವ ಆರೋಪ ಸಂಬಂಧ ಸತೀಶ್ಎಂಬವರು ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ನಡೆಯುತ್ತಿಲ್ಲ. ಆ ಆರೋಪಕ್ಕೆ ಸಂಬಂಧಿಸಿದಂತೆ ಸುತ್ತಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ನಡೆಯಲಿದೆ ಎಂದು ವಕೀಲರು ವಾದ ಮಂಡಿಸಿದರು.
ಆನ್ಲೈನ್ ಹಣ ವರ್ಗಾವಣೆ ಸಂಬಂಧ ತನಿಖೆ ಸೇರಿದಂತೆ ಬೇರೆ ಬೇರೆ ಕಂಪನಿಗಳ ಮೂಲಕ ಅರ್ಜಿದಾರರ ಪತಿ ವ್ಯವಹಾರ ನಡೆಸುತ್ತಿದ್ದಾರೆ. ಗೇಮಿಂಗ್ಕಂಪನಿಗಳ ಮೂಲಕ ಗ್ರಾಹಕರನ್ನು ವಂಚನೆ ಮಾಡಿದ್ದಾರೆ. ಕೆವೈಸಿ ನೀಡದೆಯೂ ಹಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಬೆಟ್ಟಿಂಗ್ಮಾಡಿ, ಸಂಗ್ರಹಿಸಿದ ಹಣವನ್ನು ಶ್ರೀಲಂಕಾ ದುಬೈ ಸೇರಿದಂತೆ ವಿದೇಶಗಳಲ್ಲಿ ಕೆಸಿನೋಗಾಗಿ ಹೂಡಿಕೆ ಮಾಡಲಾಗಿದೆ. ಅರ್ಜಿದಾರರ ಪತಿಯ ವಿರುದ್ಧದ ಎಲ್ಲ ಆರೋಪಗಳನ್ನು ಕ್ರೋಢೀಕರಿಸಿ ತನಿಖೆ ನಡೆಸಲಿದೆ. ಹೀಗಾಗಿ ಅವರ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ಅರ್ಜಿದಾರ ಪರ ವಾದ:
ಅರ್ಜಿದಾರರ ಪರ ವಕೀಲರು ಇದಕ್ಕೂ ಮುನ್ನ ವಾದ ಮಂಡಿಸಿ, ವೀರೇಂದ್ರ ವಿರುದ್ಧ 2011ರ ಕ್ರಿಕೆಟ್ ಬೆಟ್ಟಿಂಗ್ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2014ರಲ್ಲಿ ಆ ಪ್ರಕರಣದ ಆರೋಪಗಳಿಂದ ಖುಲಾಸೆಯಾಗಿದ್ದರು. ಇದೇ ಪ್ರಕರಣ ಸಂಬಂಧ 2015ರ ಮತ್ತೊಂದು ಎಫ್ಐಆರ್ನ್ನು ಹೈಕೋರ್ಟ್ ರದ್ದು ಮಾಡಿದೆ. 2016ರಲ್ಲಿ ದಾಖಲಾದ ಪ್ರಕರಣದಲ್ಲಿ ಕೆ.ಸಿ.ವೀರೇಂದ್ರ ಅವರು ಆರೋಪಿಯಾಗಿರಲಿಲ್ಲ.
2022ರ ದಾಖಲಾದ ಪ್ರಕರಣ ಸಂಬಂಧ ಆರೋಪಪಟ್ಟಿಯಲ್ಲಿ ವೀರೇಂದ್ರ ಅವರ ಹೆಸರನ್ನು ಕೈಬಿಡಲಾಗಿತ್ತು. ಮತ್ತೆರಡು ಪ್ರಕರಣಗಳು 2024ರಲ್ಲಿ ಮುಕ್ತಾಯಗೊಂಡಿವೆ. ಮುಕ್ತಾಯಗೊಂಡಿರುವ ಪ್ರಕರಣಗಳನ್ನು ಉಲ್ಲೇಖಿಸಿ ಇ.ಡಿ ಪ್ರಕರಣ (ಇಸಿಐಆರ್) ದಾಖಲಿಸಿಕೊಳ್ಳಲಾಗಿದೆ ಎಂದು ತಮ್ಮ ವಾದ ಮಂಡಿಸಿ ನ್ಯಾಯ ಪೀಠಕ್ಕೆ ಮಾಹಿತಿ ನೀಡಿದರು.
ವೀರೇಂದ್ರ ಅವರು ಸಿಕ್ಕಿಂನಲ್ಲಿ ಇದ್ದಾಗ ಮನೆ, ವ್ಯಾಪಾರ ಸ್ಥಳದಲ್ಲಿ ಇಡಿ ದಾಳಿ ನಡೆಸಿದೆ. ಅಂದರೆ ವೀರೇಂದ್ರ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಪಿಎಂಎಲ್ ಕಾಯ್ದೆಯಡಿ ಯಾವುದೇ ಅನುಸೂಚಿತ ಪ್ರಕರಣ ಇಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಪಿಎಂಎಲ್ ಕಾಯ್ದೆಯಡಿ ಶಾಸಕರನ್ನು ಬಂಧಿಸುವ ಮುನ್ನ ಸಮನ್ಸ್ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಬಂಧನ ಮಾಡುವವರೆಗೂ ಸಮನ್ಸ್ ನೀಡಿಲ್ಲ. ಬಂಧನ ಮೆಮೊವನ್ನು ಸಕಾಲಕ್ಕೆ ನೀಡಿಲ್ಲ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಕೀಲರು ವಿವರಣೆ ಕೊಟ್ಟರು.
ಏನಿದು ಪ್ರಕರಣ:
ದೇಶದ ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಶಾಸಕ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು.
ಇದನ್ನು ಪ್ರಶ್ನಿಸಿರುವ ಅವರ ಪತ್ನಿ, ತನ್ನ ಪತಿಯನ್ನು ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21ರಲ್ಲಿ ಲಭ್ಯವಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ತಕ್ಷಣ ವೀರೇಂದ್ರ ಅವರನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

