ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ವ್ಯಾಪ್ತಿಗೆ ನಿರ್ಮಿತಿ ಕೇಂದ್ರ ಬರಲಿದ್ದು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಲು ನಿರಾಕರಿಸಿದ ಚಿತ್ರದುರ್ಗದ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್ ಪೀಠ ಆದೇಶಿಸಿದೆ.
ರಾಜ್ಯ ಮಾಹಿತಿ ಹಕ್ಕು ಆಯೋಗದ ನಿರ್ದೇಶನ ಪ್ರಶ್ನಿಸಿ ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಮಹತ್ವದ ಆದೇಶ ನೀಡಿದೆ.
ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 2(ಎಚ್)ರಲ್ಲಿ ತಿಳಿಸಿರುವಂತೆ ಸರ್ಕಾರದ ಆದೇಶದ ಮೂಲಕ ರಚನೆ ಮಾಡಿರುವ ಸಂಸ್ಥೆ. ಸರ್ಕಾರದಿಂದ ನೇರ ಇಲ್ಲವೇ ಪರೋಕ್ಷವಾಗಿ ಹಣಕಾಸಿನ ನೆರವು ಪಡೆಯುವ ಯಾವುದೇ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರವಾಗುತ್ತದೆ. ಆದರೆ, ನಿರ್ಮಿತಿ ಕೇಂದ್ರವು ಸರ್ಕಾರದಿಂದ ಹಣಕಾಸಿನ ನೆರವು ಮಾತ್ರವಲ್ಲದೆ, ನಿಯಂತ್ರಣದಲ್ಲಿದೆ.
ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಗೆ ಸರ್ಕಾರದ ಕಾರ್ಯದರ್ಶಿಗಳು, ಇಂಜಿನಿಯರ್‌ಗಳು ಸೇರಿ ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ನಡೆಯುವ ನಿರ್ಮಿತಿ ಕೇಂದ್ರದ ಸಾಮಾನ್ಯ ಸಭೆ ಆಯಾ ಜಿಲ್ಲೆಗಳ ಉನ್ನತ ಅಧಿಕಾರಿಗಳನ್ನೊಳಗೊಂಡಿರುತ್ತದೆ. ನಿರ್ಮಿತಿ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಘಟಕವಾಗಿರುವ ವಸತಿ ಮತ್ತು ನಗರಾಭಿವೃದ್ಧಿ ನಿಗಮ(ಹುಡ್ಕೋ)ದಿಂದ ಹಣಕಾಸು ಒದಗಿಸಲಾಗುತ್ತಿದೆ. ಈ ಕೇಂದ್ರದ ದಿನನಿತ್ಯದ ಚಟುವಟಿಕೆಗಳನ್ನು ಐಎಎಸ್ ಮತ್ತು ಕೆಎಎಸ್ ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ನಡೆಸುತ್ತಾರೆ. ಆದ್ದರಿಂದ ನಿರ್ಮಿತಿ ಕೇಂದ್ರ ಸರ್ಕಾರಿ ನೌಕರರ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬ ಅಂಶ ಸ್ಪಷ್ಟ ಎಂದು ಪೀಠ ಹೇಳಿದೆ.
ನಿರ್ಮಿತಿ ಕೇಂದ್ರ ಮೂಲಕ ಸಾರ್ವಜನಿಕ ಕಾಮಗಾರಿಗಳ ಅನುಷ್ಟಾನಕ್ಕಾಗಿ ಹಣಕಾಸು ಒದಗಿಸಲಾಗುತ್ತದೆ. ಆ ಕೆಲಸಗಳು ಸರ್ಕಾರಿ ಕೆಲಸಗಳೆಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ನಿಲುವು ತೆಗೆದುಕೊಳ್ಳುವುದನ್ನು ನಿರೀಕ್ಷಿಸಲಾಗುವುದಿಲ್ಲ. ಪಾರದರ್ಶಕತೆ ನಿಯಂತ್ರಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮಾಡಿದ ಪ್ರಯತ್ನ ಒಪ್ಪುವಂಥದ್ದಲ್ಲ. ಈ ಬೆಳವಣಿಗೆ ಆತ್ಮವಿಶ್ವಾಸವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ತಿಳಿಸಿದ ಪೀಠ, ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿ ಮಾಡಬೇಕು ಎಂದು ನಿರ್ದೇಶನ ಮಾಡಿದೆ.
ಏನಿದು ಪ್ರಕರಣ:
ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಹಿರಿಯೂರು ಭಾರತ್ ಕೃಷಿಕ್ ಸಮಾಜದ ಅಧ್ಯಕ್ಷ ಎಚ್. ಆರ್.ತಿಮ್ಮಯ್ಯ ಎಂಬವರು ಹಣಕಾಸು ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ಕೇಳಿದ್ದು ಮಾಹಿತಿ ನೀಡಲು ನಿರ್ಮಿತಿ ಕೇಂದ್ರ ನಿರಾಕರಿಸಿತ್ತು. ಅಲ್ಲದೆ, ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಲ್ಲ. ಆದ್ದರಿಂದ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದ್ದರು.
ತಿಮ್ಮಯ್ಯನವರು ಇದನ್ನು ಪ್ರಶ್ನಿಸಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮಾಹಿತಿ ಆಯೋಗ ಮಾಹಿತಿ ನೀಡುವಂತೆ ನಿರ್ದೇಶನ ನೀಡಿತ್ತು. ಜೊತೆಗೆ 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಿರ್ಮಿತಿ ಕೇಂದ್ರ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಲ್ಲ. ಆದ ಕಾರಣ ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ತಿಮ್ಮಯ್ಯ ಪರ ವಕೀಲರು ಇದಕ್ಕೆ ಆಕ್ಷೇಪಿಸಿದ್ದರು, ಸರ್ಕಾರ ಆದೇಶ ಹೊರಡಿಸುವ ಮೂಲಕ ನಿರ್ಮಿತಿ ಕೇಂದ್ರ ರಚನೆ ಮಾಡಿದೆ. ಹುಡ್ಕೋ ಮೂಲಕ ಹಣಕಾಸು ಒದಗಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶಿಫಾರಸು ಮಾಡಿದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಾಗಿದೆ. ಹೀಗಾಗಿ ಮಾಹಿತಿ ಒದಗಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

