ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಡ ರೋಗಿಗಳ ದೌರ್ಭಾಗ್ಯವೋ, ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ, ಆದರೆ ಹೆರಿಗೆ ವಾರ್ಡ್ ಮೇಲ್ಚಾವಣಿ ಕುಸಿದು ಬಹುದೊಡ್ಡ ಅನಾಹುತ ತಪ್ಪಿದೆ.
ಹಿರಿಯೂರು ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ ಶಿಥಿಲಾವಸ್ಥೆಯಲ್ಲಿದ್ದು ಮೇಲ್ಚಾವಣಿ ಕುಸಿದು ರೋಗಿಗಳ ಮೇಲೆ ಬಿದ್ದು ಭುಜ ಸೇರಿದಂತೆ ಸಣ್ಣಪುಟ್ಟ ನೋವಾಗಿದೆ.
ಸರ್ಕಾರಿ ಆಸ್ಪತ್ರೆ ಮೇಲ್ಚಾವಣಿ ಸಿಥಿಲಗೊಂಡು ಬೀಳುವ ಪರಿಸ್ಥಿತಿಯಲ್ಲಿದ್ದರೂ ಅಂತಹ ವಾರ್ಡ್ಗಳಲ್ಲೇ ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಮೇಲೆಳೆದುಕೊಳ್ಳಲಾಗುತ್ತಿದೆ. ಸುಸ್ಥಿತಿಯಲ್ಲಿರುವ ವಾರ್ಡ್ ಗಳಿಗೆ ರೋಗಿಗಳನ್ನು ಶಿಫ್ಟ್ ಮಾಡುವ ಅವಕಾಶ ಇದ್ದರೂ ಅಧಿಕಾರಿಗಳು ಆ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನ ಗಮನಿಸದೇ ಇರುವುದು ತುಂಬಾ ನೋವಿನ ಸಂಗತಿ. ಈಗಲಾದರೂ ಎಚ್ಚೆತ್ತುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ರೋಗಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ ಸೇರಿದಂತೆ ಯಾವುದೇ ಕೊಠಡಿ ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿ ಮಾಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಸುಧಾಕರ್ ಇತ್ತೀಚೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರೂ ಅಧಿಕಾರಿಗಳು ಲೋಪ ಎಸಗಿದ್ದಾರೆ.

“ಇಂತಹ ದುರ್ಘಟನೆಗಳು ಮುಂದೆ ನಡೆಯಬಾರದು, ಶಿಥಿಲಾವಸ್ಥೆಯ ವಾರ್ಡ್ ಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ”. ಡಿ.ಸುಧಾಕರ್, ಜಿಲ್ಲಾ ಸಚಿವರು ಹಾಗೂ ಶಾಸಕರು, ಹಿರಿಯೂರು.
ಸಾರ್ವಜನಿಕ ಆಸ್ಪತ್ರೆಯ ಮಹಿಳೆಯರ ಹೆರಿಗೆ ವಾರ್ಡ್ ಮೇಲ್ಚಾವಣಿ ಕುಸಿದು ರೋಗಿಗಳು ಗಾಯಗೊಂಡಿದ್ದು ಈ ಘಟನೆಗೆ ಸಚಿವರೇ ನೇರ ಕಾರಣ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೆ ಅಭಿನಂದನ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರದ ಸಾರ್ವಜನಿಕ ಆಸ್ಪತ್ರೆಯ ಶಿಥಿಲಗೊಂಡ ಕೊಠಡಿಯನ್ನು ರಿಪೇರಿ ಮಾಡುವಷ್ಟು ಸರ್ಕಾರದಲ್ಲಿ ಹಣ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರ ಬಡವರ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಬಡ ರೋಗಿಗಳು ಚಿಕಿತ್ಸೆ ಪಡೆಯಲು ಹೋದರೆ ಆಸ್ಪತ್ರೆಯ ಮೇಲ್ಚಾವಣಿ ಚುರುಕೆ ಬಿಳೀತ್ತವೆ. ಬಡವರ ಬಗ್ಗೆ ಸಚಿವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ನೆಪ ಮಾತ್ರಕ್ಕೆ ವರ್ಷಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಅಷ್ಟೇ ಆದರೆ ಅಲ್ಲಿನ ಯಾವುದೇ ಸಮಸ್ಯೆಗಳ ಬಗೆಹರಿಸಿಲ್ಲ.
ಹಿಂದಿನ ಬಿಜೆಪಿ ಸರ್ಕಾರ ತಾಲೂಕಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ 25 ಕೋಟಿ ಹಣ ನೀಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂ ವರ್ಷ ಪೂರೈಸಿದರು ಆಸ್ಪತ್ರೆ ಉದ್ಘಾಟಿಸಿಲ್ಲ. ಕೂಡಲೇ ನೂತನ ಆಸ್ಪತ್ರೆ ಉದ್ಘಾಟಿಸಿ ಬಡವರ ಜೀವ ರಕ್ಷಣೆ ಮಾಡಬೇಕು”.
ಕೆ. ಅಭಿನಂದನ್, ಬಿಜೆಪಿ ತಾಲೂಕು ಅಧ್ಯಕ್ಷರು, ಹಿರಿಯೂರು.

