ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊಟ್ಟ ಸಾಲದ ದುಡ್ಡು ವಾಪಸ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಮನೆಗೆ ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನ ವಿವೇಕ ನಗರದ 2ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕಳೆದ ಜುಲೈ 1ರ ಸಂಜೆ ದುಷ್ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಲ ಪಡೆದಾತ ಸುಬ್ರಮಣಿ ಎಂಬುವನು ಸಾಲ ನೀಡಿದ್ದ ವೆಂಕಟರಮಣಿ ಮನೆಗೆ ಬೆಂಕಿ ಇಟ್ಟು ದುಷ್ಕೃತ್ಯ ಮೆರೆದಿದ್ದಾನೆ.
ಸಂತ್ರಸ್ತ ವೆಂಕಟರಮಣಿ ಅವರ ಪುತ್ರ ನೀಡಿರುವ ದೂರಿನನ್ವಯ ವಿವೇಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ-
ಆರೋಪಿ ಸುಬ್ರಮಣಿಯ ಸಹೋದರಿ ಪಾರ್ವತಿ ತನ್ನ ಮಗಳ ಮದುವೆಗಾಗಿ ವೆಂಕಟರಮಣಿಯ ಬಳಿ 5 ಲಕ್ಷ ರೂ. ಹಣ ಸಾಲ ಪಡೆದಿದ್ದಳು. 7-8 ವರ್ಷಗಳಾದರೂ ಸಹ ಪಡೆದ ಸಾಲದ ಹಣ ಮರಳಿ ನೀಡಿರಲಿಲ್ಲ. ಹಣ ಕೊಡುವಂತೆ ಕೇಳಿದಾಗ ವೆಂಕಟರಮಣಿಯ ಮನೆಯ ಬಳಿ ಪಾರ್ವತಿ ಮತ್ತು ಆಕೆಯ ಪುತ್ರಿ ಬಂದು ಜೀವ ಬೆದರಿಕೆ ಹಾಕಿದ್ದರಂತೆ. ಇದೇ ವಿಚಾರಕ್ಕೆ ಸಿಟ್ಟಾದ ಆರೋಪಿ, ಜುಲೈ 1ರಂದು ಸಂಜೆ 5 ಗಂಟೆಗೆ ವೆಂಕಟರಮಣಿ ಮತ್ತು ಅವರ ಮಗ ಮನೆಯಲ್ಲಿದ್ದಾಗ ಬಂದು ಬಾಗಿಲ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಮನೆಯ ಮುಂಭಾಗ ಮತ್ತು ಕಿಟಕಿ ಸುಟ್ಟು ಹೋಗಿದೆ. ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೆಂಕಟರಮಣಿ ಪುತ್ರ ನೀಡಿರುವ ದೂರಿನನ್ವಯ ಸುಬ್ರಮಣಿ, ಸಹೋದರಿ ಪಾರ್ವತಿ, ಪುತ್ರಿ ಮಹಾಲಕ್ಷ್ಮಿ ವಿರುದ್ಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.