ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಗತ್ತಿನಲ್ಲಿ ಅನ್ನದ ಹಸಿವಿಗಿಂತಲೂ ಜೀವನ ಪ್ರೀತಿಯ ಹಸಿವನ್ನು ಹೆಚ್ಚಿಸಿಕೊಳ್ಳಬೇಕು. ಜೀವನ ಪ್ರೀತಿ ಇಲ್ಲದಿದ್ದರೆ ಬದುಕುವುದಕ್ಕೆ ಅಸಾಧ್ಯ ಎಂದು ಡಾ. ಬಸವಕುಮಾರ ಸ್ವಾಮೀಜಿ ನುಡಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.
ಶ್ರೀಮಠದಲ್ಲಿ ಶುಭ, ಅಶುಭ, ಅಮಾವಾಸ್ಯೆ, ಹುಣ್ಣಿಮೆ ಯಾವುದನ್ನೂ ಲೆಕ್ಕಿಸದೆ ಕಳೆದ ೩೪ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದುಕೊಂಡು ಬಂದಿದೆ. ಒಂದು ಜೋಡಿ ಇದ್ದರೂ ೧೦೦ ಜೋಡಿ ಇದ್ದರೂ ಒಂದೇ ರೀತಿಯ ಸಂಭ್ರಮ ಶ್ರೀಮಠದಲ್ಲಿ ಇರುತ್ತದೆ. ಶ್ರೀಮಠವು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಬಂದಿದೆ.
ಅದರಲ್ಲಿ ಶಿಕ್ಷಣ, ದಾಸೋಹ, ಗುರುಕುಲ, ವಚನಕಮ್ಮಟ ಅದರಂತೆ ಸಾಮೂಹಿಕ ಕಲ್ಯಾಣ ಮಹೋತ್ಸವವೂ ಒಂದು. ಇಂದಿನ ದಿನಮಾನಗಳಲ್ಲಿ ರಾಜಕಾರಣಿಗಳು ಸಾಮೂಹಿಕ ಕಲ್ಯಾಣವನ್ನು ತಮ್ಮ ಲಾಭಕ್ಕಾಗಿ ಮಾಡಿಸುತ್ತಾರೆ ಅಥವಾ ಜಾತ್ರೆಗಳಲ್ಲಿ ಸಾಮೂಹಿಕ ಮದುವೆ ಮಾಡುತ್ತಾ ಬರಲಾಗಿದೆ. ಆದರೆ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ೩೫ವರ್ಷಗಳ ಹಿಂದೆಯೇ ಶ್ರೀಮಠವು ಮುನ್ನುಡಿಯನ್ನು ಬರೆದಿದ್ದು, ಈಗ ನಾಡಿನೆಲ್ಲೆಡೆ ಮನ್ನಣೆಯನ್ನು ಪಡೆದಿದೆ ಎಂದು ಹೇಳಲು ಸಂತೋಷವಾಗುತ್ತದೆ. ಹಾಗೇ ಇದೇ ತಿಂಗಳ ೧೮ ಮತ್ತು ೧೯ರಂದು ಶ್ರೀಮಠದಲ್ಲಿ ೧೩ನೇ ಅಖಿಲ ಭಾರತ ಶರಣಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.
ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಪುಷ್ಯಮಾಸದಲ್ಲಿ ಮದುವೆಗಳು. ಕಡಿಮೆ. ಆದರೆ ಶ್ರೀಮಠದಲ್ಲಿ ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲೇ ನಮ್ಮ ಮದುವೆಯಾಗಬೇಕೆನ್ನುವ ಹಂಬಲವನ್ನು ಹೊಂದಿ ಧಾರವಾಡದಿಂದ ಬಂದಿರುವ ನವಜೋಡಿಗೆ ಶುಭಾಷಯಗಳು. ಹೊಸವರ್ಷದ ದಿನ ವರ್ಷಾಚರಣೆಯನ್ನು ಮಾಡಿ ನಂತರ ಮರೆಯುತ್ತಾರೆ. ಹೊಸ ವರ್ಷದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು.
ದಿನವೂ ನಿತ್ಯನೂತನ ಎನ್ನುವ ಭಾವನೆ ಹೊಂದಬೇಕು. ಪ್ರತಿದಿನ ಮಲಗುವ ಮುನ್ನ ದೈನಂದಿನ ಆತ್ಮಾವಲೋಕನ ಮಾಡಿ ನಿದ್ರಿಸಬೇಕು. ನಮ್ಮಿಂದ ಈ ದಿನ ಯಾರಿಗಾದರು ತೊಂದರೆಯಾಗಿದೆಯೇ ಅಥವಾ ಉಪಕಾರವಾಗಿದೆಯೆ? ತಪ್ಪುಗಳೆಷ್ಟು? ಸರಿಯೆಷ್ಟು ಎಲ್ಲದರ ಬಗ್ಗೆ ಆತ್ಮಾವಲೋಕನ ಮಾಡಿದಾಗ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ. ಸಂಸಾರ ಜೀವನ ಯಶಸ್ವಿಯಾಗಲು ದಂಪತಿಗಳಲ್ಲಿ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಗೌರವ ಇರಬೇಕು. ಆಗ ಜೀವನದಲ್ಲಿ ಸಂಸಾರವೆಭ ಹೂವು ಎಂದಿಗೂ ಬಾಡದೆ ಸದಾ ಹಸಿರಾಗಿರುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವೈದ್ಯೆ ಡಾ.ರೂಪಶ್ರೀ ಬಿ.ವೈ, ನನ್ನ ತಂದೆ ಶಿಕ್ಷಕರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದೆ. ನಂತರ ವೈದ್ಯೆ ಆಗಬೇಕೆಂದು ನನ್ನ ತಂದೆ ಉತ್ತೇಜನ ನೀಡಿ ಬೆಂಬಲಿಸಿದರು.
ವೈದ್ಯಶಿಕ್ಷಣ ಪೂರೈಸಿ ಸರ್ಕಾರಿ ಆಸ್ಪತ್ರೆಗೆ ವೈದ್ಯೆಯಾಗಿ ಸೇವೆ ಪ್ರಾರಂಭಿಸಿದೆ. ಮರಡಿಹಳ್ಳಿಯಲ್ಲಿ ೭ವರ್ಷ ನಂತರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಮುಂದುವರೆಸಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಶ್ರೀಮಠವು ಸನ್ಮಾನಿಸಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಒಂದು ಜೋಡಿ ವಿವಾಹ ನೆರವೇರಿತು.
ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಡಾ. ಎನ್.ಜೆ. ಶಿವಕುಮಾರ್ ಸ್ವಾಗತಿಸಿದರು. ಲಂಕೇಶ್ ದೇವರು ನಿರೂಪಿಸಿದರು. ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.