ಹೆಂಡತಿ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿ ಗಂಡನಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ದಂಡ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ನಗರದ ವೆಂಕಟೇಶ್ವರ ಬಡಾವಣೆ ಹತ್ತಿರದ ಶ್ರೀರಂಗ ಪೆಟ್ರೋಲ್ ಬಂಕ್ ಮುಂಭಾಗದ ಚಳ್ಳಕೆರೆ ರಸ್ತೆಯಲ್ಲಿ ಆರೋಪಿ ಎಂ.ಮೆಹಬೂಬ್‌ಭಾಷ ಬಿನ್ ಮಿಠಾಯಿ ಗೌಸ್‌ಸಾಬ್ ಕಮಲಾಪುರ ಗ್ರಾಮ, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ ಈತ ತನ್ನ ಹೆಂಡತಿ ಅಮೀನಾಭಾನುರ ಶೀಲ ಶಂಕಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು, ಚಿತ್ರದುರ್ಗ ಬಡಾವಣೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ತನಿಖೆ ಪೂರೈಸಿ ಸದರಿ ಆರೋಪಿತನ ಮೇಲೆ ಕಲಂ.೩೦೨ ಐಪಿಸಿ ರೀತ್ಯಾ ದೋಷರೋಪಣಾಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಲಯದಲ್ಲಿ ಪ್ರಕರಣದ ವಾದ-ಪ್ರತಿವಾದ ನಡೆದು ಆರೋಪಿ ಮೆಹಬೂಬ್ ಭಾಷ ತನ್ನ ಹೆಂಡತಿ ಶೀಲ ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದು ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರೋಣಾ ವಾಸುದೇವ್ ಇವರು ಆರೋಪಿತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಸಜೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶನಾಯ್ಕ್ ವಾದ ಮಂಡಿಸಿದ್ದರು.