ಕನ್ನಡ ಬದುಕಿನ ಅಸ್ಮಿತೆ, ಭವಿಷ್ಯದ ಭಾಷೆ ಕನ್ನಡ-ಯಾದವರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಬದುಕಿನ ಅಸ್ಮಿತೆ
, ಭವಿಷ್ಯದ ಭಾಷೆ. ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ಕರ್ನಾಟಕದಲ್ಲಿರುವ ಏಳು ಕೋಟಿ ಜನರು ಕನ್ನಡವನ್ನು ಮಾತನಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ತಿಳಿಸಿದರು.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ೬೯ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಾಂಭೆಗೆ ನಮಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅನೇಕ ಸಾಹಿತಿಗಳು ಕನ್ನಡವನ್ನು ಶ್ರೀಮಂತ ಭಾಷೆಯನ್ನಾಗಿಸಿದ್ದಾರೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದು ಕನ್ನಡಕ್ಕೆ ಮಾತ್ರ. ಖಾಸಗಿ ಶಾಲೆಗಳು ಕನ್ನಡವನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಂತರ ಹಿಂದಿ, ಇಂಗ್ಲಿಷ್ ಕಲಿತರೆ ತಪ್ಪೇನಿಲ್ಲ.

ಕನ್ನಡದ ಮೇಲೆ ಅನ್ಯ ಭಾಷೆಯನ್ನು ಹೇರಬಾರದು. ಎಸ್.ನಿಜಲಿಂಗಪ್ಪ, ಜಾಫರ್‌ಷರೀಫ್ ಸೇರಿದಂತೆ ಅನೇಕರು ಈ ಶಾಲೆಯಲ್ಲಿ ಓದಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದರಸಗಳಲ್ಲಿಯೂ ಕನ್ನಡ ಭಾಷೆ ಕಲಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ ದ.ರಾ.ಬೇಂದ್ರೆ, ಕುವೆಂಪು, ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕಾಗಿ ಹೋರಾಡಿರುವುದರಿಂದ ಇಂದು ನಾವು ನೀವುಗಳೆಲ್ಲರೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರು ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕೆಂದರು.

ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಉಪಾಧ್ಯಕ್ಷ ಆದಿಲ್, ಮುಖ್ಯ ಶಿಕ್ಷಕಿ ತಸ್ಮಿಯ ಹಾಗೂ ಶಿಕ್ಷಕ ವೃಂದದವರು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";