ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ನಿರಂತರವಾಗಿ ದ್ವೇಷ ಸಾಧಿಸುತ್ತಾ, ರಾಜ್ಯಪಾಲರ ಸಂವಿಧಾನದತ್ತ ಅಧಿಕಾರಗಳನ್ನು ಮೊಟಕುಗೊಳಿಸುತ್ತಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಸೋಮವಾರ ಪಾದಯಾತ್ರೆ ನಡೆಸಲಾಯಿತು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಗೌರವಾನ್ವಿತ ರಾಜ್ಯಪಾಲರು ಹಾಗೂ ರಾಜಭವನಕ್ಕೆ ಅಪಮಾನ ಮಾಡುತ್ತಾ ಬಂದಿದೆ. ಆಯೋಗಗಳಿಗೆ, ತನಿಖಾ ಸಂಸ್ಥೆಗಳು ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದ್ವೇಷ ಸಾಧಿಸುತ್ತಾ ಬರುತ್ತಿರುವ, ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ವಿವಿಧ ಸಂವಿಧಾನದತ್ತ ಅಧಿಕಾರಗಳನ್ನು ಮೊಟಕುಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಬಲವಾಗಿ ಖಂಡಿಸುತ್ತಾ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಶಾಸಕರ ಭವನದಿಂದ-ವಿಧಾನಸೌಧದವರೆಗೆ ನಡೆದ ಪ್ರತಿಭಟನಾ ಪಾದಯಾತ್ರೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ಬಾಬು ಸಿ.ಬಿ., ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕರಾದ ನೇಮಿರಾಜ್‌ನಾಯಕ್, ಸಿ.ಟಿ ರವಿ, ವಿಧಾನ ಪರಿಷತ್‌ಸದಸ್ಯರುಗಳಾದ ಟಿ.ಎ. ಶರವಣ, ಮಂಜೇಗೌಡ, ಗೋವಿಂದರಾಜು ಅವರು ಸೇರಿದಂತೆ ಎರಡೂ ಪಕ್ಷಗಳ ಶಾಸಕರು ಹಾಗೂ ವಿಧಾನ ಪರಿಷತ್‌ಸದಸ್ಯರು ಭಾಗವಹಿಸಿದ್ದರು.