ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ತೀರ್ಪು ಕಾಯ್ದಿರಿಸಿದ ನ್ಯಾಯಾಧೀಶರು

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಪಾಲರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್​ ಅರ್ಜಿಯ ವಿಚಾರಣೆ ಗುರುವಾರ ಪೂರ್ಣಗೊಂಡಿದ್ದು ಹೈಕೋರ್ಟ್ ತನ್ನ ತೀರ್ಪ ಕಾಯ್ದಿರಿಸಿ ಗುರುವಾರ ಆದೇಶಿಸಿದೆ.

ಜನಪ್ರತಿನಿಧಿಗಳ ಕೋರ್ಟ್ ನ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠದಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿದೆ ಮತ್ತು ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದೆ.

ರಾಜ್ಯಪಾಲರ ಪರವಾಗಿ ಈಗಾಗಲೇ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ರಾಜ್ಯ ಸರ್ಕಾರದ ಪರವಾಗಿ ಶಶಿಕಿರಣ್​ ಶೆಟ್ಟಿ ವಾದ ಮಂಡಿಸಿದ್ದಾರೆ. ಗುರುವಾರ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲರಾದ ಅಭಿಷೇಕ್​ ಮನು ಸಿಂಘ್ವಿ ಅವರು ವಾದ ಮಂಡಿಸಿದರು.
ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ರಾಷ್ಟ್ರಪತಿ ಆಳ್ವಿಕೆಗಿಂತ ಹೆಚ್ಚು ರಾಜಕೀಯ ಪ್ರೇರಿತ. ಸೆಕ್ಷೆನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ. ಎಲ್ಲಾ ಪ್ರಕರಣಗಳಲ್ಲೂ ಸಚಿವ ಸಂಪುಟ ಸಿಎಂ ಪರ ಇದೆ
, ತಾರತಮ್ಯ ಮಾಡಿದೆ ಎನ್ನಲಾಗದು. ಸಚಿವ ಸಂಪುಟದ ಸಭೆಯಲ್ಲಿ ಮಂತ್ರಿಗಳು ಬೇರೆ ಬೇರೆ ಅಭಿಪ್ರಾಯ ಮಂಡಿಸಬಹುದು ಎಂದು ಅಭಿಷೇಕ್​ ಮನು ಸಿಂಘ್ವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

 ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ಪಾಲಿಸಲೇಬೇಕೆಂದಿಲ್ಲ. ಆದರೆ ಭಿನ್ನ ನಿಲುವಿಗೆ ಕಾರಣ ನೀಡಬೇಕೆಂಬುದು ನಿಮ್ಮ ವಾದವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, ಸಚಿವ ಸಂಪುಟದ ಶಿಫಾರಸನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸು ತಪ್ಪೆಂದು ಹೇಳಿಲ್ಲ. ಹೀಗಾಗಿ ಕಾರಣವೇ ಹೇಳದೆ ಸಚಿವ ಸಂಪುಟದ ಕ್ರಮ ತಾರತಮ್ಯಪೂರಿತವೆನ್ನಲಾಗದು ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ಸುಧೀರ್ಘ ವಾದ, ಪ್ರತಿವಾದ ಆಲಿಸಿದ  ನಂತರ ತೀರ್ಪು ಕಾಯ್ದಿರಿಸಿ ಆದೇಶಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";