ಕಲ್ಲಹಳ್ಳಿ ಯುವಕ ಕನಕ ಪುರಸ್ಕಾರಕ್ಕೆ ಬಾಜನರಾಗಿದ್ದು

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಉಬಾಮಎಂಬ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕ ಉಮೇಶ ಬಾಬು ಮಠದ್. ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ.ಕಲ್ಲಹಳ್ಳಿಯವರು.

ತಂದೆ ಬಸಯ್ಯ, ತಾಯಿ ಏಕಾಂತಮ್ಮ ರವರ ಮಗನಾಗಿ, 1983ರ ಜೂನ್‌23ರಂದು ಜನಿಸಿದ ಅವರು ಎಂ.ಎ.ಬಿ.ಎಡ್. ಪಿ.ಜಿ.ಡಿ. ಎ.ಐ.ಎಂ., ಪಿ.ಜಿ.ಡಿ.ಸಿ.ಟಿ.ಟಿ.ಸಿ,. ಪದವೀಧರರು.

ಸದ್ಯ ದಾವಣಗೆರೆ ವಾಸಿಯಾಗಿ ಜಿಲ್ಲೆಯ ಜಗಳೂರು ನ್ಯಾಯಾಲಯದ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದರಿಯವರು ಕಳೆದ 2 ದಶಕಗಳಿಂದ ಸುಮಾರು 150 ಅಧಿಕ ಕವಿಗೋಷ್ಠಿಗಳು ಹಾಗೂ ಉಪನ್ಯಾಸ, ವಿಚಾರ ಸಂಕಿರಣಗಳಲ್ಲಿ ಬಾಗವಹಿಸಿದ್ದು, ಯೋಗ ತರಗತಿಗಳನ್ನು ನೀಡುವ ಮೂಲಕ ಸಾಮಾಜಿಕ ಹಾಗೂ ಸಾಹಿತಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆಗಳನ್ನು ನೀಡಿದ್ದಾರೆ,

ಇಷ್ಟೇ ಅಲ್ಲದೇ ಕಥೆ, ಕವನ, ಚುಟುಕು, ಲೇಖನ,ಪ್ರಬಂದಗಳು, ಕಾದಂಬರಿ ಹಾಗೂ ಬಸವ ಕಾಂತರ ಕಂದ ಎನ್ನುವ ಅಂಕಿತನಾಮದ ಮೂಲಕ ಆಧುನಿಕ ವಚನಗಳ ಸಂಪುಟವನ್ನು ಪ್ರಕಟಣೆಗೆ ಅಣಿಗೊಳಿಸಲು ಸಿದ್ದರಾಗಿದ್ದಾರೆ.

ಈಗಾಗಲೇ ವಸುಧೆಯೊಳಗಿನ ಅರ್ಭಟ ಎಂಬ ಕವನ ಸಂಕಲನ , ಚಿಗುರೆಲೆಗಳು  ಎಂಬ ಚುಟುಕು ಸಂಕಲನ ಹಾಗೂ ಸೋತ ಮನಸ್ಸಿಗೆ ಸಮಾಧಾನ ಎಂಬ ಕಥಾಸಂಕಲನ, ಬೆವರ್ಸಿ ಬದುಕಿನ ಬರಹಗಳು ಎಂಬ ಲೇಖನ ಸಂಕಲನ, ಕನಕರ ಕಾವ್ಯಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಎನ್ನುವ ಸಂಶೋಧನ ಲೇಖನ ಕೃತಿ ಪ್ರಕಟಿಸಿದ್ದಾರೆ.

ನಿತ್ಯ ಸಂಜೀವಿನಿ ಮಂಗಳಾರತಿಎಂಬ ಸಂಪಾದಿತ ಕೃತಿ ಹಾಗೂ ಪುಟಗೋಸಿ ಫೀಲಿಂಗ್ಸ್ ಕವನ ಸಂಕಲನ ಹೀಗೆ ಅನೇಕ ಕೃತಿಗಳನ್ನು ನಾಡಿಗೆ ನೀಡಿದ್ದಾರೆ.

ಇವರು ಕಳೆದ 10 ವರ್ಷಗಳಿಂದ ಕನಕದಾಸರ ಕುರಿತು ಅಧ್ಯಯನ ಮಾಡಿ, ಅವರ ಕಾವ್ಯಗಳಿಂದ ಪ್ರಭಾವತರಾಗಿ ಅನೇಕ ವಿಚಾರಗೋಷ್ಠಿಗಳು ಮತ್ತು ಉಪನ್ಯಾಸಗಳನ್ನು ಏರ್ಪಡಿಸಿದ್ದು, ಕನಕರ ಕುರಿತು ರಾಜ್ಯ ಮಟ್ಟದ ಕವಿಗೋಷ್ಠಿಗಳನ್ನು ನಡೆಸಿ, ಕನಕರ ಕುರಿತು ಸಮೀಕ್ಷೆಗಳನ್ನು ಹಮ್ಮಿಕೊಂಡು, ಜೊತೆಗೆ ನಾಡಿನ 17 ಹಿರಿಯ ಸಾಧಕರನ್ನು ಗುರುತಿಸಿ ಅವರುಗಳಿಗೆ ಕನಕ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.

ಸದರಿಯವರಿಗೆ ಚಿತ್ರದುರ್ಗ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಯುವಜನ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಯುವ ಪ್ರಶಸ್ತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ 30ಕ್ಕೂ ಅಧಿಕ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.

ಅಷ್ಟೇ ಅಲ್ಲದೇ ನಾಡಿನ ವಿವಿಧ ಜಿಲ್ಲೆಗಳ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸದರಿಯವರಿಗೆ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರಿಯ ಸಂತ ಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕೊಡ ಮಾಡುವ ಯುವ ವಿದ್ವಾoಸರಿಗೆ ನೀಡುವ ಕನಕ ಯುವ ಪುರಸ್ಕಾರ2024ಕ್ಕೆ ಆಯ್ಕೆಯಾಗಿದ್ದು ದಿನಾಂಕ 18ನೇ ನವಂಬರ್ 2024ರಂದು ನಡೆಯುವ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇವರನ್ನು ಅಭಿನಂದಿಸಿ ನಾಡಿನ ಗಣ್ಯ ಸಾಹಿತಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಗೌರವಿಸಿದ್ದು ಚಂದ್ರವಳ್ಳಿ ಪ್ರಾದೇಶಿಕ ಪತ್ರಿಕಾ ಬಳಗವು ಅಭಿನಂದಿಸಲಿದೆ.

- Advertisement -  - Advertisement -  - Advertisement - 
Share This Article
error: Content is protected !!
";