ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಹಳೆ ಮೊಳಗಿತು. ರಾಜ್ಯೋತ್ಸವದ ಅಂಗವಾಗಿ ಶನಿವಾರ ಆಯೋಜಿಸಲಾದ ತಾಯಿ ಭುವನೇಶ್ವರಿ ಭಾವಚಿತ್ರದ ಆಕರ್ಷಕ ಮೆರವಣಿಗೆ ಜನಮನ ಸೂರೆಗೊಂಡಿತು.
ವಿವಿಧ ಇಲಾಖೆಗಳ ಸ್ತಬ್ಧಚಿತ್ರ ಮೆರವಣಿಗೆ ಮಧ್ಯೆ ತೋಟಗಾರಿಕೆ ಇಲಾಖೆಯ ಮದುವನ ಹಾಗೂ ಜೇನು ಸಾಗಣಿಕೆ ಮಹತ್ವ ಸಾರುವ ಬೃಹತ್ ದುಂಬಿ ಸ್ಥಬ್ದಚಿತ್ರ, ಅದರಿಂದ ಹೊರಡುತ್ತಿದ್ದ, ಮಧುವನದ ಗುಂಯ್ಯೀ ಗುಟ್ಟಿದ ದುಂಬಿ ನಿನಾದ ಸರ್ವರರೂ ಆಶ್ಚರ್ಯ ನೋಟದಿಂದ ಮೆರವಣೆಗೆ ಕಡೆ ನೋಡುವಂತೆ ಮಾಡಿತು.
ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸ್ತಬ್ಧಚಿತ್ರ ಮೆರವಣಿಗೆ ಚಾಲನೆ ನೀಡಿದರು.
ದುರ್ಬಲ ವರ್ಗದವರ ಏಳಿಗಾಗಿ ಸರ್ಕಾರ ರೂಪಿಸಿರುವ ಹಲವಾರು ಯೋಜನೆಗಳ ಮಹತ್ವ ಸಾರಿದ ಸಮಾಜ ಕಲ್ಯಾಣ ಸ್ತಬ್ಧಚಿತ್ರ ಪ್ರಥಮ ಪ್ರಶಸ್ತಿಗೆ ಭಾಜನವಾಯಿತು. ತೋಟಗಾರಿಕೆ ಇಲಾಖೆ ಸ್ತಬ್ದಚಿತ್ರ ದ್ವಿತೀಯ ಸ್ಥಾನ ಪಡೆದರೆ, ಶಾಲಾ ವಾಹನಗಳ ಸುರಕ್ಷತೆ ಹಾಗೂ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದ ಪ್ರಾದೇಶಿಕ ಸಾರಿಗೆ ಇಲಾಖೆ ಸ್ತಬ್ದಚಿತ್ರ ಮೂರನೇ ಬಹುಮಾನಕ್ಕೆ ಭಾಜನವಾಯಿತು.
ಕೆ.ಎಸ್.ಆರ್.ಟಿ ಸ್ತಬ್ದಚಿತ್ರ ಶಕ್ತಿ ಯೋಜನೆ ವಿಶ್ವ ದಾಖಲೆಯನ್ನು ಸ್ಮರಿಸಿತು. 2023 ಜೂನ್ 11 ರಂದು ಚಾಲನೆ ನೀಡಲಾದ ಶಕ್ತಿ ಯೋಜನೆಯಡಿ 2025 ಜೂನ್ 11 ವರೆಗೆ 504 ಕೋಟಿ 90 ಲಕ್ಷ ಬಾರಿ ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಜಿಲ್ಲೆಯ ಗಣಿಬಾಧಿತ ತಾಲ್ಲೂಕು ವ್ಯಾಪ್ತಿಯಲ್ಲಿ ಕೆ.ಎಂ.ಇ.ಆರ್.ಸಿ ಹಾಗೂ ಸಿಇಪಿಎಂಐಝಡ್ ಅನುದಾನ ಅಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಿಸುವ ವಿನೂತನ ಕಾರ್ಯಕ್ರಮದ ಕುರಿತು ಶಿಕ್ಷಣ ಇಲಾಖೆ ಸ್ತಬ್ದಚಿತ್ರ ಮಾಹಿತಿ ನೀಡಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪ್ರವಾಸೋದ್ಯಮ ಇಲಾಖೆಗಳ ಸ್ತಬ್ದಚಿತ್ರಗಳು ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸಿದವು. ಮೆರವಣಿಗೆಯಲ್ಲಿ ಕಹಳೆ,ವೀರಗಾಸೆ, ತಮಟೆ ವಾದ್ಯ ವೃಂದ,ಡೋಲು,ಲಂಬಾಣಿ ನೃತ್ಯ ಕಲಾತಂಡ, ಸೇವಾದಳ, ವಿವಿಧ ಶಾಲಾ ಮಕ್ಕಳು ಇತರೆ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.
ಮೆರವಣಿಗೆ ಗಾಂಧಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ರಾಣಿ ( ಎಸ್.ಬಿ.ಐ) ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಪೊಲೀಸ್ ಕವಾಯತು ಮೈದಾನ ತಲುಪಿತು. ಈ ವೇಳೆ ಜಿ.ಪಂ. ಸಿಇಓ ಡಾ.ಆಕಾಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಗರ ಸಭೆ ಆಯುಕ್ತೆ ಲಕ್ಷ್ಮೀ,
ತಹಶೀಲ್ದಾರ್ ಗೋವಿಂದ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆ ಸಿಂಘೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

