ಕುಂಚಿಟಿಗ ಸಂಘಕ್ಕೆ ಪರಿಹಾರ, ಪರ್ಯಾಯ ಜಮೀನು ನೀಡಲು ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಹೃದಯ ಭಾಗದಲ್ಲಿರುವ ಸಮಾಜದ ದಾನಿ ಕಾಮಕ್ಕನವರು ನೀಡಿರುವ ಕುಂಚಿಟಿಗ ವಿದ್ಯಾರ್ಥಿ ನಿಲಯದ ಜಾಗದಲ್ಲಿ ಅನಧಿಕೃತ ಮನೆಗಳು ನಿರ್ಮಾಣವಾಗಿದ್ದು ನಗರಸಭೆ ಈ ಎಲ್ಲ ಮನೆಗಳು ಮತ್ತು ಇಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿರುವುದು ಕಾನೂನು ಬಾಹಿರವಾಗಿದೆ.

ಇದೇ ಮೇ-27 ರಂದು ನಡೆಯಲಿರುವ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಮಾಡಿ 2025-26ನೇ ಸಾಲಿನ ಉಪ ನೋಂದಣಾಧಿಕಾರಿಗಳ ಮೌಲ್ಯ ಮತ್ತು ಮಾರುಕಟ್ಟೆ ಮೌಲ್ಯ ಆಧರಿಸಿ ಪರಿಹಾರ ನೀಡಬೇಕು ಅಥವಾ ಮಾರುಕಟ್ಟೆ ಮೌಲ್ಯಕ್ಕೆ ಸರಿಹೊಂದುವಂತೆ ಪರ್ಯಾಯ ಜಮೀನು ನೀಡಲು ಜಿಲ್ಲಾ ಕುಂಚಿಟಿಗ ಸಂಘ ಹಾಗೂ ಕುಂಚಿಟಿಗ ಸಮಾಜದ ಮುಖಂಡರು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಹಿಂದೆ ಕುಂಚಿಟಿಗರ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯಕ್ಕಾಗಿ ದಾನಿ ಕಾಮಕ್ಕನವರು ಜಿಲ್ಲಾ ಕುಂಚಿಟಿಗರ ಸಂಘದ ಕಾರ್ಯದರ್ಶಿ, ನಾಡುಕಂಡ ಸರಳ, ಸಜ್ಜನಿಕೆ, ಪ್ರಮಾಣಿಕತೆಗೆ ಹೆಸರಾದ ಹಾಗೂ ಮುಜರಾಯಿ ಸಚಿವರಾಗಿದ್ದ ವಿ.ಮಸಿಯಪ್ಪನವರ ಹೆಸರಿಗೆ ಕುಂಚಿಟಿಗ ಸಮಾಜದ ಮಹಾ ದಾನಿ ಕಾಮಕ್ಕನವರು ಒಂದು ಸಾವಿರ ರೂ. ಪಡೆದು ದಾನ ನೀಡಿದ್ದರು.

ಕಾಮಕ್ಕನವರು ಕುಂಚಿಟಿಗ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ನೀಡಿದ್ದ ಒಂದು ಎಕರೆ ಮತ್ತು ಕಾಮಕ್ಕನವರ ಹೆಸರಿಗೆ ಇರುವ 1.07 ಎಕರೆ ಸೇರಿ ಒಟ್ಟು 2.07 ಎಕರೆ ಜಮೀನಿನಲ್ಲಿ ಅನಧಿಕೃತವಾಗಿ ಮನೆಗಳು ನಿರ್ಮಾಣವಾಗಿವೆ. ನಗರಸಭೆ ಆಡಳಿತದಿಂದ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆಗಳಿಗೆ, ನಾಗರಿಕರಿಗೆ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದೆ.

     ಈಗಲೂ ಸಹ ನಗರಸಭೆಯ ಅಧಿಕೃತ ಖಾತೆಯಲ್ಲಿ ಜಿಲ್ಲಾ ಕುಂಚಿಟಿಗರ ಸಂಘದ ಕಾರ್ಯದರ್ಶಿ ಹೆಸರಿಗೆ ಖಾತೆ ಇದ್ಜರೂ ಕುಂಚಿಟಿಗ ಸಮಾಜವು ಅಲ್ಲಿರುವ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ನೀಡಿರುವುದಿಲ್ಲ. ಅಲ್ಲದೆ ಒಕ್ಕಲೆಬ್ಬಿಸುವ ಪ್ರಯತ್ನವನ್ನೂ ಮಾಡಿರುವುದಿಲ್ಲ ಎನ್ನುವುದು ಬಹಳ ಮುಖ್ಯವಾದ ವಿಷಯ ಎಂದು ಸಮಾಜದ ಮುಖಂಡರು ಹೇಳಿದರು.

    ಈ ಮನವಿಯೊಂದಿಗೆ ನಗರಸಭೆಗೆ ಜಮೀನಿನ ಅಧಿಕೃತ ದಾಖಲೆಗಳನ್ನು ಲಗತ್ತು ಮಾಡಿದ್ದೇವೆ. 2025-26ನೇ ಸಾಲಿನ ಉಪ ನೋಂದಣಾಧಿಕಾರಿಗಳ ಬೆಲೆ ಮತ್ತು ಮಾರುಕಟ್ಟೆ ಬೆಲೆ ನಿರ್ಧರಿಸಿ ಪರಿಹಾರ ನೀಡಲಿ ಅಥವಾ ಮಾರುಕಟ್ಟೆ ಮೌಲ್ಯ ಆಧರಿಸಿ ಸೂಕ್ತ ಜಮೀನು ನೀಡಲು ಸಮಾಜದವರು ಆಗ್ರಹ ಮಾಡಿದರು.

  ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗ ಜನಾಂಗ ಇದ್ದು ಹಿರಿಯೂರು ನಗರದಲ್ಲಿ ಒಂದು ಇಂಚು ಜಾಗ ಇಲ್ಲದಿರುವುದು ನೋವು ಸಂಗತಿ. ಕುಂಚಿಟಿಗ ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆ ಕೂಡಲೇ ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ಅಥವಾ ಪರ್ಯಾಯ ಜಮೀನು ನೀಡುವಂತೆ ಆಗ್ರಹ ಮಾಡಿ ಕುಂಚಿಟಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ವಾಸೀಂ ಅವರು, ಸರ್ಕಾರದ ಕಾನೂನು ಮತ್ತು ಮಾರ್ಗ ಸೂಚಿ ಅನ್ವಯ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಾಧ್ಯಾಪಕ ಡಿ.ಧರಣೇಂದ್ರಯ್ಯ ಇವರು ಕೋರಿಕೆ ಪತ್ರ ಓದಿದರು.

   ಹಿರಿಯೂರು ನಗರಸಭಾ ಸದಸ್ಯರಾದ ವಿಠಲ್, ಹೆಚ್.ಎಂ ಗುಂಡೇಶ್ ಕುಮಾರ್, ಜಿಲ್ಲಾ ಕುಂಚಿಟಿಗರ ಸಂಘದ ಕಾರ್ಯದರ್ಶಿ ಸಿ.ಹೆಂಜಾರಪ್ಪ, ಸಮಾಜದ ಮುಖಂಡರಾದ ಕೆ.ಟಿ ರುದ್ರಮುನಿ, ವಕೀಲ ದೊಡ್ಡಘಟ್ಟ ಶಿವಕುಮಾರ್, ಆರ್.ಮೂಡ್ಲಪ್ಪ, ಉಪನ್ಯಾಸಕ ಕೆಕೆ ಹಟ್ಟಿ ಕಾಂತರಾಜ್, ನಿವೃತ್ತ ಶಿಕ್ಷಕ ಏಕಾಂತಪ್ಪ, ಶಿಕ್ಷಕರಾದ ಹನುಮಂತರೆಡ್ಡಿ, ಜೆಜಿಹಳ್ಳಿ ತಿಪ್ಪೇಸ್ವಾಮಿ, ಕೆ.ಸಿ. ಹೊರಕೇರಪ್ಪ, ಜಿ.ಹನುಮಂತರಾಯ, ಕುರುಬರಹಳ್ಳಿ ದೇವರಾಜ್, ಕೆ.ಜಿ.ಹನಮಂತರಾಯ, ಗಂಗಾಧರಪ್ಪ, ಪಿಟ್ಲಾಲಿ ಪ್ರಸನ್ನ ಮತ್ತಿತರ ಸಮಾಜದ ಮುಖಂಡರು ನಗರಸಭಾ ಪೌರಾಯುಕ್ತರಾದ ಎ.ವಾಸೀಂ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Share This Article
error: Content is protected !!
";