ದೇವನಹಳ್ಳಿಯ ಭೂ ಸ್ವಾಧೀನ ಪ್ರಕ್ರಿಯೆ ಕೂಡಲೇ ವಾಪಸ್ ಪಡೆಯಬೇಕು: ವಿನಯ್ ಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವನಹಳ್ಳಿಯಲ್ಲಿ ರೈತರ ಭೂಮಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಕೈಗಾರಿಕೆ ಬೆಳೆದರೆ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಯೋಜನೆ ಮಾಡುವುದು ತಪ್ಪಲ್ಲ. ಆದ್ರೆ
, ರಾಜ್ಯ ಸರ್ಕಾರವು ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು. ರೈತರೇ ಸ್ವಯಂ ಪ್ರೇರಿತರಾಗಿ ಭೂಮಿ ಕೊಡುವವರೆಗೆ ನಿರ್ಧಾರ ಹಿಂಪಡೆಯಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.

- Advertisement - 

ದೇವನಹಳ್ಳಿ ವಿಮಾನ ನಿಲ್ದಾಣ ಮತ್ತು ಚನ್ನರಾಯಪಟ್ಟಣದ ಮಧ್ಯೆ ಬರುವ 1777 ಎಕರೆ ರೈತರ ಜಮೀನನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ ಭೂ ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್ ಕೊಟ್ಟಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಏರೋ ಸ್ಪೇಸ್ ಗಾಗಿ ಹತ್ತಿರದಲ್ಲಿ ಭೂಮಿ ಇರುವ ಕಾರಣಕ್ಕೆ ಸ್ವಾಧೀನಪಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ. ರೈತರನ್ನು ಒಕ್ಕಲೆಬ್ಬಿಸಿ ಬಲವಂತದಿಂದ ಭೂ ಸ್ವಾಧೀನ ಮಾಡುತ್ತಿರುವುದು ಘೋರ ಅನ್ಯಾಯ. ಈ ಕ್ರಮದಿಂದ ಸರ್ಕಾರದ ಮೇಲಿರುವ ವಿಶ್ವಾಸ ಕಳೆದುಹೋಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement - 

ಭೂ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಹಲವು ವರದಿಗಳು ಬಂದಿವೆ. ಭೂ ಒಡೆಯರು ಕೂಲಿ ಕಾರ್ಮಿಕರಾಗಿದ್ದಾರೆ. ಚಿಕ್ಕಪುಟ್ಟ ಭೂಮಿ ಇದೆ. ಸರ್ಕಾರ ಬಲವಂತವಾಗಿ ಭೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಚರ್ಚೆ ನಡೆಯುತ್ತಿದೆ. ದೇವನಹಳ್ಳಿ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಯೂ ಭೂ ಸ್ವಾಧೀನ ವಿರೋಧಿಸಿ ಹೋರಾಟ ನಡೆಯುತ್ತಿದೆ. ಇದಕ್ಕೆ ಬೆಂಬಲವೂ ಇದೆ ಎಂದು ಹೇಳಿದ್ದಾರೆ.

ಭೂ ಸ್ವಾಧೀನ ಪಡಿಸಿಕೊಂಡ ಬಳಿಕ ಪರಿಹಾರ, ಪುನರ್ವಸತಿ ಕಲ್ಪಿಸುವ ಸಂಬಂಧ ಹಲವು ಪ್ರಕರಣಗಳಲ್ಲಿ ನಾವು ನೀಡಿದ್ದೇವೆ. ಸಮರ್ಪಕವಾಗಿ ಅನುಷ್ಠಾನವಾಗಿರುವುದು ತುಂಬಾನೇ ಕಡಿಮೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣಿದು ರೈತರ ಜಮೀನು ಕಸಿದುಕೊಳ್ಳುವುದರಿಂದ ಸಮಾಜದಲ್ಲಿ ಅಸಮಾನತೆ ಹುಟ್ಟುತ್ತದೆ.

- Advertisement - 

ಸಂತ್ರಸ್ತರು ಯಾರ ಬಳಿ ಹೋಗಿ ತಮ್ಮ ನೋವು ಹೇಳಿಕೊಳ್ಳಬೇಕು, ನ್ಯಾಯ ಪಡೆದುಕೊಳ್ಳಲು ಅಶಕ್ತರಾಗುತ್ತಾರೆ. ಅಧಿಕಾರಿಗಳು, ಸರ್ಕಾರವು ಸ್ಪಂದಿಸದ ಕೆಟ್ಟ ವ್ಯವಸ್ಥೆ ಇದೆ. ಅನ್ಯಾಯವಾದವರಿಗೆ ನ್ಯಾಯ ಸಿಗುವುದಿಲ್ಲ. ಕಾನೂನು ಹೋರಾಟ ಮಾಡಲು ಹಣ, ಶಕ್ತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಅಳಲು ಸರ್ಕಾರಗಳು ಕೇಳುವುದಿಲ್ಲ.
ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವುದು ದೊಡ್ಡ ತಪ್ಪು ಎಂದು ಕಿಡಿಕಾರಿದ್ದಾರೆ.

ಯೋಜನೆ ಮಾಡುವುದೇ ಆದರೆ ರಾಜ್ಯ ಸರ್ಕಾರವು ರೈತರ ಜೊತೆ ಮಾತುಕತೆ ನಡೆಸಲಿ. ಅವರಿಗೆ ಸಮರ್ಪಕ ಪರಿಹಾರ, ಅನುಕೂಲ ಮಾಡಿಕೊಡಬೇಕು. ರೈತರೇ ಸ್ವಯಂ ಒಪ್ಪಿಗೆಯಿಂದ ನೀಡಿದರೆ ಸರ್ಕಾರ ಭೂಮಿ ಪಡೆದುಕೊಳ್ಳಲಿ. ಇದಕ್ಕೆ ಯಾರ ಅಭ್ಯಂತರವೂ ಇರುವುದಿಲ್ಲ. ಅಲ್ಲಿ ತನಕ ನಿರ್ಧಾರ ಹಿಂಪಡೆಯಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.

Share This Article
error: Content is protected !!
";