ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಕೈ‘ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ! “ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಒಂದು ವೇಳೆ ರಾಹುಲ್ ಗಾಂಧಿ ಅವರ ಆರೋಪಗಳಿಗೆ ಪುರಾವೆ ಇದ್ದರೆ, ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಪ್ರತ್ಯುತ್ತರ ಕೊಟ್ಟಿದೆ ಎಂದು ಅಶೋಕ್ ತಿಳಿಸಿದರು.
ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿದ್ದರೆ ಚುನಾವಣಾ ಆಯೋಗಕ್ಕೆ ಪುರಾವೆ ಒದಗಿಸಬೇಕು. ಇಲ್ಲವಾದರೆ ದೇಶದ ಮತದಾರರಲ್ಲಿ ಕ್ಷಮೆ ಯಾಚಿಸಬೇಕು. ಅದು ಬಿಟ್ಟು ಹೀಗೆ ಹಾದಿ ಬೀದಿಯಲ್ಲಿ ಪೋಸ್ಟರ್ ಅಂಟಿಸಿ ನಮ್ಮ ದೇಶದ ಚುನಾವಣಾ ವ್ಯವಸ್ಥೆಗೆ, ಮತದಾರರಿಗೆ, ಜನಾದೇಶಕ್ಕೆ ಅಪಮಾನ ಮಾಡುವುದು ಯಾವ ಸೀಮೆ ನ್ಯಾಯ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರೇ, ಮತಗಳ್ಳತನ ಎಂಬ ಈ ನಾಟಕ ತಮ್ಮ ಮೂರ್ಖತನ ಪ್ರದರ್ಶನ ಮಾಡುತ್ತದೆಯೇ ಹೊರತು ಮತ್ತೇನೂ ಅಲ್ಲ. ನಿಮ್ಮ ಸೋಲಿನ ಹತಾಶೆಯಿಂದ ನಮ್ಮ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಊಹಾಪೋಹ ಸೃಷ್ಟಿಸುವ ಪಾಪದ ಕೆಲಸ ಮಾಡಬೇಡಿ ಎಂದು ಅವರು ತಾಕೀತು ಮಾಡಿದ್ದಾರೆ.

