ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಇಡೀ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹೇಳುವವರು, ಕೇಳುವವರು ಯಾರೂ ಇಲ್ಲ. ಗೂಂಡಾ ರಾಜ್ಯದ ಅಪರಾವತಾರ ಆದಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತರಾಟೆ ತೆಗೆದುಕೊಂಡರು.
ವಿಧಾನಸಭೆಯಲ್ಲಿ ಅವರು ಬಜೆಟ್ ಅಧಿವೇಶನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಲಂಗುಲಗಾಮಿಲ್ಲ. ಬಿಡದಿ ಬಳಿಯ ಟೊಯೋಟಾ ಕಂಪನಿಯ ಗೋಡೆಯ ಮೇಲೆ ಪಾಕಿಸ್ತಾನಕ್ಕೆ ಜೈ ಎಂದು ಕಿಡಿಗೇಡಿಗಳು ಬರೆದಿದ್ದಾರೆ. ಅಲ್ಲದೇ ಶೌಚಾಲಯದಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಸಿ ನಿಂಧಿಸಿ ಬರೆದಿದ್ದಾರೆ. ಇದು ನಾವೆಲ್ಲರೂ ತಲೆತಗ್ಗಿಸುವಂತಹ ವಿಚಾರ ಎಂದು ಅವರು ಕಿರಿಕಾರಿದರು.
ಕಾನೂನು ಮತ್ತು ಸುವ್ಯವಸ್ಥೆಗೂ ರಾಜ್ಯ ಸರ್ಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗೃಹ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಣೆ ಮಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಾಕಿಸ್ತಾನ ಜಿಂದಾಬಾದ್:
ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಕನ್ನಡಿಗರನ್ನು ಅವಾಚ್ಯ ಶಬ್ದ ಬಳಸಿ ಬರೆದಿರುವ ಬಗ್ಗೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಕಿಡಿಗೇಡಿಗಳು ಈ ರೀತಿ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿಸಿಟಿವಿ ಪರಿಶೀಲನೆ ಮಾಡಿ ಸೆಕೆಂಡ್‌ನಲ್ಲಿ ಕಿಡಿಗೇಡಿಗಳನ್ನು ಸೆರೆ ಹಿಡಿಯಬಹುದಾಗಿತ್ತು. ಆದರೂ ಸರ್ಕಾರ ಮೌನವಾಗಿದೆ ಎಂದು ಅಶೋಕ್ ಅವರು ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದರು.
ಹಾವೇರಿ ಜಿಲ್ಲೆಯ ಸ್ವಾತಿ ಎಂಬ ನರ್ಸ್ ಹೋರಿ ಓಡಿಸುವ ಸ್ಪರ್ಧೆಗೆ ಹೋಗುವ ಅಭ್ಯಾಸ ಹೊಂದಿದ್ದರು. ಹೋರಿ ಹಬ್ಬದಲ್ಲಿ ಉಂಟಾದ ಸ್ನೇಹ ಲವ್ ಜಿಹಾದ್‌ನಲ್ಲಿ ಅಂತ್ಯವಾಗಿದೆ. ಮಾರ್ಚ್-6 ರಂದು ರಾಣೆಬೆನ್ನೂರಿಗೆ ಹೋಗಿದ್ದಾರೆ. 7 ರಂದು ಅವರ ತಾಯಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆಕೆಗೆ ನಯಾಜ್ ಎಂಬ ವ್ಯಕ್ತಿ ಪರಿಚಯವಾಗಿ ಪ್ರೀತಿ ಅಂಕುರವಾಗುತ್ತದೆ. ಸ್ಥಳೀಯರಾದ ವಿನಯ್, ದುರ್ಗಾಚಾರಿ ಎಂಬುವರು ಕೂಡ ಅದಕ್ಕೆ ಸಹಕಾರ ನೀಡಿರುತ್ತಾರೆ ಎಂದು ಅಶೋಕ್ ಅವರು ತಿಳಿಸಿದರು.