ಹೆಚ್.ಸಿ.ಗಿರೀಶ್, ಹರಿಯಬ್ಬೆ, ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಈ ನಾಲ್ಕು ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಹಾಗೂ ಜನ ಜಾನುವಾರುಗಳಿಗೆ ನೀರುಣಿಸುವ ಮಹತ್ವದ ಉದ್ದೇಶದಿಂದ ರೂಪಿಸಿದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಾಲ್ಕು ಜಿಲ್ಲೆಯ 367 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ತಮ್ಮ ಊರನ್ನ ಸೀಳಿಕೊಂಡು ಚಿತ್ರದುರ್ಗ ಬ್ರಾಂಚ್ ಕಾಲುವೆ ತೆರಳುತ್ತಿದ್ದರೂ ಚಿಕ್ಕ ಸಿದ್ದವ್ವನಹಳ್ಳಿ ಕೆರೆ ಹನಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ತಾಂತ್ರಿಕವಾಗಿ ಚಿಕ್ಕಸಿದ್ದವ್ವನಹಳ್ಳಿ ಕೆರೆ ಎತ್ತರದಲ್ಲಿದೆ, ಬ್ರಾಂಚ್ ಕಾಲುವೆ ತಗ್ಗು ಪ್ರದೇಶದಲ್ಲಿ ಹಾದು ಹೋಗುತ್ತಿದೆ ಎನ್ನುವ ಸಬೂಬು ಯೋಜನಾ ಅನುಷ್ಠಾನದ ಅಧಿಕಾರಿಗಳದಾಗಿದೆ. ಆದರೆ ಇಡೀ ಭದ್ರಾ ಮೇಲ್ದಂಡೆ ಯೋಜನೆಯೇ ಲಿಫ್ಟ್ ಮಾಡುತ್ತಿರುವುದು ಎನ್ನುವುದನ್ನ ಅಧಿಕಾರಿಗಳು ಮರೆತಿದ್ದಾರೆ. ಸರ್ಕಾರಕ್ಕೆ ಇಚ್ಚಾಶಕ್ತಿ ಇದ್ದರೆ ಕೆರೆ ಸಮೀಪದಲ್ಲಿ ಒಂದು ಲಿಫ್ಟ್ ಪಂಪ್ ಅಳವಡಿಸಿ ನೀರು ಕೊಡಲು ಸಾಧ್ಯವಿದೆ. ಆದರೆ ಅಧಿಕಾರಿಗಳ ಕೆಂಗಣ್ಣಿಗೆ ಚಿಕ್ಕಸಿದ್ದವ್ವನಹಳ್ಳಿ ಕೆರೆ ಗುರಿಯಾಗಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಹೊರಗುಳಿಯುವಂತಾಗಿರುವುದು ವಿಪರ್ಯಾಸ.
ಅಂದಿನ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಮುರುಘಾ ಮಠದ ಎರಡು ಕೆರೆ, ಸಿದ್ದಾಪುರ, ಮಾನಂಗಿ, ಕಾಟೀಹಳ್ಳಿ, ಹುಲ್ಲೂರು, ಅನ್ನೇ ಹಾಳು, ನಂದಿಪುರ, ಕುರುಮರಡಿಕೆರೆ ಮತ್ತು ಚಿಕ್ಕಸಿದ್ದವ್ವನಹಳ್ಳಿ ಕೆರೆಗಳನ್ನು ಭದ್ರಾ ಯೋಜನೆಯಿಂದ ಹೊರಗೆ ಇಡಲಾಗಿದ್ದು ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದರು.
ಚಿಕ್ಕಸಿದ್ದವ್ವನಹಳ್ಳಿ ಕೆರೆ-
ಹಿರಿಯೂರು ತಾಲೂಕಿನ ಗಡಿ ಭಾಗದ ಚಿಕ್ಕಸಿದ್ದವ್ವನಹಳ್ಳಿ ಚಿತ್ರದುರ್ಗ ತಾಲೂಕಿನ ಸೆರಗಿಗೆ ಹೊಂದಿಕೊಂಡಿದೆ. ಅಪ್ಪಟ ಕೃಷಿಕರು, ಶ್ರಮಿಕರು, ಕುಶಲಕರ್ಮಿಕಗಳಿಂದ ತುಂಬಿರುವ ಚಿಕ್ಕಸಿದ್ದವ್ವನಹಳ್ಳಿ ಕೆರೆಯ ಪಶ್ಚಿಮದ ಸುತ್ತಲು ಬೆಟ್ಟಗುಡ್ಡಗಳಿಂದ ಕೂಡಿದ್ದು ಮಧ್ಯದಲ್ಲಿ ಕಣಿವೆಗಳು, ಹಳ್ಳಕೊಳ್ಳ, ಹುಲ್ಲುಗಾವಲುಗಳಿಂದ ತುಂಬಿದ ಶುದ್ಧ ಪರಿಸರದಲ್ಲಿರುವ ಕುಗ್ರಾಮ ಚಿಕ್ಕಸಿದ್ದವ್ವನಹಳ್ಳಿ.
ಈ ಊರಿನ ನೀರಿನ ಮೂಲವೇ ಕೆರೆ. 1850ರಲ್ಲಿ ಚಿಕ್ಕಸಿದ್ದವ್ವನಹಳ್ಳಿ ಕೆರೆ ನಿರ್ಮಿಸಲಾಗಿದೆ. 18.80 ಎಂಸಿಎಫ್ ಟಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು 85.22 ಹೆಕ್ಟೇರ್ ಪ್ರದೇಶಕ್ಕೆ ನೀರಾಯಲಿದೆ. ಕೆರೆಯ ಏರಿಯ ಉದ್ದ 660 ಮೀಟರ್. ಕೆರೆಯ ಜಲಾನಯನ ಪ್ರದೇಶ 56.96 ಹೆಕ್ಟೇರ್ ಆಗಿದೆ.
ಚಿಕ್ಕಸಿದ್ದವ್ವನಹಳ್ಳಿ ಕೆರೆ ಭರ್ತಿಯಾದರೆ ಸುತ್ತ ಮುತ್ತಲ ಹಲವು ಹಳ್ಳಿಗಳ ಅತರ್ಜಲ ಮಟ್ಟ ವೃದ್ಧಿ ಆಗಲಿದೆ. ಚಿಕ್ಕಸಿದ್ದವ್ವನಹಳ್ಳಿ, ಕಾರೋಬನಹಟ್ಟಿ, ಗೊಲ್ಲರಹಟ್ಟಿ, ಪಾಲವ್ವನಹಳ್ಳಿ, ನೆರೆನಾಳ್, ಜೆ.ಎನ್.ಕೋಟೆ ಕೆರೆ ಸೇರುತ್ತಿತ್ತು. ಇದಲ್ಲದೆ ಕೋವೇರಹಟ್ಟಿ, ಹೊಸ ನಾಯಕರಹಟ್ಟಿ, ಸಿ.ಎಸ್ ಹಳ್ಳಿ ಜಮೀನುಗಳಿಗೆ ನೇರವಾಗಿ ಕೆರೆ ನೀರು ಹರಿದು ರೈತರ ಬದುಕು ಹಸನಾಗುತ್ತಿತ್ತು.
ಭದ್ರಾ ಯೋಜನೆ-
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗದ ಮುಖ್ಯ ಕಾಲುವೆ ಚಿಕ್ಕಸಿದ್ದವ್ವನಹಳ್ಳಿ ಗ್ರಾಮದ ಕೇವಲ 300 ಮೀಟರ್ ದೂರದಲ್ಲಿ ಹಾದು ಹೋಗಿದೆ. ನಮ್ಮೂರಿನ ಕೆರೆಗೂ ನೀರು ಬರಲಿದೆ ಎಂದು ರೈತರು ಸಂಭ್ರಮ ಪಟ್ಟಿದ್ದರು. ಹಿತ್ತಲ ಗಿಡ ಮದ್ದಲ್ಲ, ದೀಪದ ಕೆಳಗೆ ಕತ್ತಲು ಎನ್ನುವುದು ಅಕ್ಷರಶಃ ಚಿಕ್ಕಸಿದ್ದವ್ವನಹಳ್ಳಿಗೆ ಹೊಲಿಕೆ ಆಗಿದೆ. ಇದರಿಂದಾಗಿ ರೈತರ ಸಂಭ್ರಮ ಕೊನೆ ತನಕ ಉಳಿಯಲಿಲ್ಲ.
ರೈತರ ಸ್ಥಿತಿಗತಿ-
ಭದ್ರಾ ಮೇಲ್ದಂಡೆ ಯೋಜನೆಗೆ ರೈತರು ಯಾವುದೇ ರೀತಿ ಅಡ್ಡಿ ಮಾಡದೇ ತನ್ನ 25-30 ಲಕ್ಷ ಬೆಲೆ ಬಾಳುವ ಭೂಮಿಯನ್ನು ಕೇವಲ 4 ಲಕ್ಷ ಪರಿಹಾರ ಪಡೆದು ನಮ್ಮೂರಿನ ಕೆರೆಗೂ ನೀರು ಹರಿಯಲಿದೆ ಎನ್ನುವ ಕಾರಣಕ್ಕೆ ಬಿಟ್ಟುಕೊಟ್ಟಿದ್ದಾರೆ. ಆದರೆ ಇಂದು ಕೆರೆಗೆ ನೀರು ತುಂಬಿಸುತ್ತಿಲ್ಲ. ಅತ್ತ ಜಮೀನು ಇಲ್ಲ, ಇತ್ತ ನೀರು ಇಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.
“ಎಲ್ಲ ರೈತರು ಭೂಮಿ ನೀಡಿದರೆ ನಿಮ್ಮೂರಿನ ಕಣಿಕೆ ಕೆರೆ, ಚಿಕ್ಕಸಿದ್ದವ್ವನಹಳ್ಳಿ ಕೆರೆ, ಗೋಪಾಲಪುರ ಕೆರೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಅದನ್ನ ನಂಬಿಕೆ 30 ಲಕ್ಷ ಬೆಲೆ ಬಾಳುವ ಜಮೀನನ್ನು ಕೇವಲ 4 ಲಕ್ಷ ಪರಿಹಾರ ಪಡೆದು ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೆ ಈಗ ಅಧಿಕಾರಿಗಳು ನೀರು ಹರಿಸಲು ಸಾಧ್ಯವಿಲ್ಲ, ನಿಮ್ಮೂರಿನ ಕೆರೆ ಎತ್ತರದಲ್ಲಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳು ಏನೇ ಹೇಳಿದರೂ ಜನಪ್ರತಿನಿಧಿಗಳು ಇಚ್ಚಾಶಕ್ತಿ ಮೆರೆದು ಲಿಫ್ಟ್ ಮಾಡಿ ಚಿಕ್ಕಸಿದ್ದವ್ವನಹಳ್ಳಿ ಕೆರೆ ನೀರು ನೀಡಲಿ”.
ಕೋವೇರಹಟ್ಟಿ ಎನ್.ತಿಪ್ಪೇಸ್ವಾಮಿ, ಪ್ರಗತಿಪರ ರೈತರು ಹಾಗೂ ಮಾಜಿ ಅಧ್ಯಕ್ಷರು, ಪಿಎಲ್ಡಿ ಬ್ಯಾಂಕ್.
“ಚಿಕ್ಕಸಿದ್ದವ್ವನಹಳ್ಳಿ ಕೆರೆ ಭರ್ತಿಯಾದರೆ ಪಾಲವ್ವನಹಳ್ಳಿ, ಚಿಕ್ಕಸಿದ್ದವ್ವನಹಳ್ಳಿ, ಕೋವೇರಹಟ್ಟಿ, ಕಲ್ಲಹಟ್ಟಿ, ಮರಡಿದೇವಿಗೆರೆ, ಸಾಲಹುಣಸೆ ಗೊಲ್ಲರಹಟ್ಟಿ, ಬುರುನರೊಪ್ಪ ಇಷ್ಟು ಹಳ್ಳಿಗಳಿಗೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೇವಲ 30-50 ಅಡಿ ಆಳದಲ್ಲಿ ನೀರು ಸಿಗಲಿದೆ. ರೈತರು ನೀರು ಮತ್ತು ಕರೆಂಟ್ ಬಿಟ್ಟು ಬೇರೆ ಏನು ಕೇಳುವುದಿಲ್ಲ, ಕೂಡಲೇ ಸಿ.ಎಸ್.ಹಳ್ಳಿ ಕೆರೆಗೆ ನೀರು ಭರ್ತಿ ಮಾಡಲಿ”.ಕೆ.ದ್ಯಾಮೇಗೌಡ, ಪ್ರಗತಿಪರ ರೈತರು, ಮಾಜಿ ಅಧ್ಯಕ್ಷರು, ಜಿಪಂ, ಚಿತ್ರದುರ್ಗ.
“ಚಿಕ್ಕಸಿದ್ದವ್ವನಹಳ್ಳಿ ಕೆರೆ ಭರ್ತಿಯಾಗುತ್ತಿದ್ದ ಸಂದರ್ಭದಲ್ಲಿ ಊರಿನ ರೈತರು ಸಮೃದ್ಧಿ ಬದುಕು ಕಟ್ಟಿಕೊಂಡಿದ್ದರು. ಆದರೆ ಇಂದು ನೀರಿಲ್ಲದ ಕಾರಣ ಊರು ತೊರೆದು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಕೆರೆಗೆ ನೀರು ಭರ್ತಿ ಮಾಡಿದರೆ ವಲಸೆ ಹೋಗಿರುವ ರೈತರು ವಾಪಸ್ ಊರಿಗೆ ಬಂದು ಮತ್ತೆ ಬೇಸಾಯ ಮಾಡಲಿದ್ದಾರೆ”. ವಿ.ಚನ್ನಬಸಪ್ಪ, ಚಿಕ್ಕಸಿದ್ದವ್ವನಹಳ್ಳಿ.
“ಆರಂಭದಲ್ಲಿ ಸಿಎಸ್ ಹಳ್ಳಿ ಕೆರೆ ಬಿಟ್ಟು ಹೋಗಿತ್ತು. ಆ ಕೆರೆಯು ಸೇರಿ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿ ಒಟ್ಟು 10 ಕೆರೆಗಳಿಗೆ ನೀರು ಭರ್ತಿ ಮಾಡಲು ಯೋಜನೆ ರೂಪಿಸಲಾಗಿತ್ತು. ಈಗ ನೀರು ಹರಿಸುವುದಿಲ್ಲ ಎನ್ನುವ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳಲ್ಲಿ ಮಾತನಾಡಿ ಸೇರ್ಪಡೆ ಮಾಡುವಂತೆ ಸೂಚನೆ ನೀಡುತ್ತೇನೆ”.
-ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ, ಚಿತ್ರದುರ್ಗ.
“ಚಿಕ್ಕಸಿದ್ದವ್ವನಹಳ್ಳಿ ಕೆರೆ ಚಿತ್ರದುರ್ಗ ಮುಖ್ಯ ಕಾಲುವೆಗಿಂತ ಎತ್ತರದಲ್ಲಿದೆ. ಗುರುತ್ವಾಕರ್ಷಣೆ ಮೂಲಕ ನೀರು ನೀಡಲು ಸಾಧ್ಯವಿಲ್ಲ. ಆದರೂ ಕಾಮಗಾರಿ ಪೂರ್ಣಗೊಂಡ ನಂತರ ಚಿಕ್ಕಸಿದ್ದವ್ವನಹಳ್ಳಿ ಕೆರೆಗೂ ಏನಾದರೂ ಮಾಡಿ ನೀರು ಹರಿಸುವ ಕಾರ್ಯ ಮಾಡಲಾಗುತ್ತದೆ, ರೈತರಿಗೆ ಭಯಬೇಡ”.
ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯೂರು ಕ್ಷೇತ್ರದ ಶಾಸಕರು.
“ಭದ್ರಾ ಮೇಲ್ದಂಡೆ ಯೋಜನೆ ಅಡಿ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ನೀರು ಹರಿಸುತ್ತಿಲ್ಲ. ತಾಂತ್ರಿಕ ಕಾರಣದಿಂದಾಗಿ ಕೆರೆಗೆ ನೀರು ಭರ್ತಿ ಮಾಡುತ್ತಿಲ್ಲ”.ಪರಶುರಾಮ್, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ.
ಏನಿದು ಭದ್ರಾ ಯೋಜನೆ-
ಕರ್ನಾಟಕ ರಾಜ್ಯದ ಅತ್ಯಂತ ಮಹತ್ವದ ಯೋಜನೆಗಳ ಪೈಕಿ ಭದ್ರಾ ಮೇಲ್ದಂಡೆ ಯೋಜನೆಯೂ ಒಂದು. 29.90 ಟಿಎಂಸಿ ನೀರು ಬಳಕೆ ಮಾಡಲಾಗಗುತ್ತದೆ ಯೋಜನೆ 2 ಹಂತಗಳಲ್ಲಿ ಜಾರಿಗೆ ಬರಲಿದೆ. ಪ್ಯಾಕೇಜ್‌ರ ಅಡಿ ತುಂಗಾ ನದಿಯಿಂದ ಹದಿನೇಳೂವರೆ ಟಿಎಂಸಿ ನೀರನ್ನ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ಯಾಕೇಜ್‌ರ ಅಡಿ ಭದ್ರಾ ಜಲಾಶಯದಿಂದ ಸುಮಾರು 29.90 ಟಿಎಂಸಿ ನೀರನ್ನ ಲಿಫ್ಟ್‌ಮಾಡಿ ಅಜ್ಜಂಪುರದಲ್ಲಿ ಇರುವ ಸುರಂಗದವರೆಗೆ ಹರಿಸಿ ನಂತರ ತುಮಕೂರು ಮತ್ತು ಚಿತ್ರದುರ್ಗ ಬ್ರಾಂಚ್ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ.
ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ಐದೂವರೆ ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ನೀರು ಹರಿಯಲಿದೆ. ಜೊತೆಗೆ ಈ ಭಾಗದ 367 ಕೆರೆಗಳಿಗೆ ನೀರು ತುಂಬಿಸಲಿದೆ. ಈ ಯೋಜನೆಯಿಂದ 787 ಗ್ರಾಮಗಳು ಪ್ರಯೋಜನ ಪಡೆಯಲಿವೆದೆ. ಒಟ್ಟಾರೆ 75 ಲಕ್ಷ ಜನರಿಗೆ ನೇರವಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಅನುಕೂಲ ಆಗಲಿದೆ.