ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಡೀ ದೇಶವೇ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಮಮ್ಮಲ ಮರುಗುತ್ತಿದೆ. ಪಾಕಿಸ್ತಾನದ ಚಿತಾವಣೆ ಹಾಗೂ ಪಿತೂರಿಯ ಮುಖವಾಡಗಳೆನಿಸಿದ ರಣಹೇಡಿ ಉಗ್ರರ ಪೈಶಾಚಿಕ ವರ್ತನೆಯಿಂದ ಶತಕೋಟಿ ಭಾರತೀಯರು ಆಕ್ರೋಶಭರಿತರಾಗಿದ್ದಾರೆ.
ಇಂತಹ ಸಮಯದಲ್ಲಿ ಭಾರತದ ಏಕತೆಗೆ ದನಿಗೂಡಿಸಬೇಕಾದ ಕಾಂಗ್ರೆಸ್ಸಿಗರು ‘ಮೊಸರಲ್ಲಿ ಕಲ್ಲು ಹುಡುಕುವ ಕೀಳು ರಾಜಕೀಯ ಅಭಿರುಚಿಯ ಹೇಳಿಕೆಗಳನ್ನು ನೀಡುತ್ತಿರುವುದು ದುರ್ದೈವದ ಸಂಗತಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಒಬ್ಬರು ಭದ್ರತಾ ವೈಫಲ್ಯವೆಂದು ಟೀಕಿಸುವುದು, ಮತ್ತೊಬ್ಬರು ಆರ್ಟಿಕಲ್370 ರದ್ದುಪಡಿಸಿದ ಪರಿಣಾಮ ಎಂದು ಹೇಳುವುದು, ರಾಜ್ಯದ ಸಚಿವರೊಬ್ಬರು ಬಿಜೆಪಿ ಮುಸ್ಲಿಮರನ್ನು ದ್ವೇಷಿಸಿದ್ದೇ ಘಟನೆಗೆ ಕಾರಣ ಎಂಬ ಅರ್ಥದಲ್ಲಿ ದ್ವೇಷ ಬಿತ್ತುವ ಬೇಜವಾಬ್ದಾರಿತನದ ಬಾಲಿಶ ಹೇಳಿಕೆ ನೀಡುವುದು ಮುಂದುವರೆದಿದೆ. ಇದು ಭಾರತದ ಏಕತೆ ಹಾಗೂ ಸುರಕ್ಷತೆಗೆ ಭಂಗ ತರುವ ನಡವಳಿಕೆಯಲ್ಲದೇ ಬೇರೇನೂ ಅಲ್ಲ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಸುರಕ್ಷತೆಗಾಗಿ ದಿಟ್ಟ ಹೆಜ್ಜೆ ಇಡಲು ಹೊರಟಿರುವ ಕ್ರಮವನ್ನು‘ತಾವು ಯುದ್ಧದ ಪರ ಅಲ್ಲ’ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುವ ಮೂಲಕ ಪಲಾಯನ ವಾದಿ ನಿಲುವು ಪ್ರಕಟಿಸಿ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಭಾರತ ಎಂದೂ ಯುದ್ಧ ದಾಹವನ್ನು ಪ್ರದರ್ಶಿಸಿಲ್ಲ, ಇತಿಹಾಸವನ್ನು ಅವಲೋಕಿಸಿದಾಗಲೆಲ್ಲ ಪಾಕಿಸ್ಥಾನ ಕಾಲು ಕೆರೆದು ಭಾರತವನ್ನು ಕೆಣಕಿದ ಪರಿಣಾಮವೇ ಯುದ್ಧ ನಡೆದಿದೆ. ಅದು ಸ್ವಾತಂತ್ರ್ಯಾನಂತರದ ಪಾಕಿಸ್ತಾನ ಯುದ್ದಗಳಿಂದಿಡಿದು ಎರಡೂ ರಾಷ್ಟ್ರಗಳ ನಡುವೆ ಸ್ನೇಹದ ಬೆಸುಗೆ ಬೆಸೆಯಲು ಹೊರಟ ಅಜಾತ ಶತ್ರು ನೇತಾರನೆಂದೇ ಬಣ್ಣಿಸಲ್ಪಟ್ಟ ಅಂದಿನ ಪ್ರಧಾನಿ ವಾಜಪೇಯಿ ಅವರ ನಂಬಿಕೆಗೆ ದ್ರೋಹವೆಸಗಿ ಕಾರ್ಗಿಲ್‌ಯುದ್ಧ ನಡೆದ ಘಟನೆಯಾಗಬಹುದು, ಉದ್ದಕ್ಕೂ ಪಾಕಿಸ್ತಾನ ಭಾರತವನ್ನು ಕೆಣಕುತ್ತಾ ಬಂದಿದೆ ಆಕ್ರಮಣ ಮಾಡಲು ಬಂದು ಪೆಟ್ಟನ್ನೂ ತಿಂದು ಹಿಮ್ಮೆಟ್ಟಿದೆ, ಸೋಲಿನ ರುಚಿಯನ್ನೂ ಅನುಭವಸಿದೆ ಎಂದು ವಿಜಯೇಂದ್ರ ಟಾಂಗ್ ನೀಡಿದರು.
ಈ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಮಯದಲ್ಲಿ ಪಾಕ್‌ಆಕ್ರಮಿತ ಕಾಶ್ಮೀರವನ್ನು ಮರುವಶ ಪಡೆಸಿಕೊಳ್ಳುವ ಅವಕಾಶವಿತ್ತು, ಆದರೆ ಆ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಬದ್ಧತೆ-ದಿಟ್ಟತೆ ತೋರದಿರುವುದು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವುದನ್ನು ಮುಖ್ಯಮಂತ್ರಿಗಳು ಒಮ್ಮೆ ನೋಡಿಕೊಳ್ಳಲಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.
ಮುಖ್ಯಮಂತ್ರಿಗಳ ಪ್ರಕಾರ ಎಷ್ಟೇ ನಮಗೆ ಉಪಟಳ ನೀಡಿದರೂ, ನಮ್ಮ ಜನರ ಮಾರಣಹೋಮ ಆದರೂ, ನಮ್ಮ ಸೈನಿಕರು ಸಾಲು ಸಾಲಾಗಿ ಪ್ರಾಣ ತೆತ್ತರೂ ಭಾರತ ಯುದ್ಧ ಮಾಡದೇ ಶಾಂತಿ ಮಂತ್ರ ಪಠಿಸಬೇಕೇ? ಯುದ್ಧ ಭಾರತದ ಆದ್ಯತೆಯಲ್ಲ ಎಂಬುದು ಎಷ್ಟು ಮುಖ್ಯವೋ ರಾಷ್ಟ್ರದ ಸುರಕ್ಷತೆ, ಭಾರತೀಯರ ಅಮೂಲ್ಯ ಜೀವಗಳ ರಕ್ಷಣೆ ಅದಕ್ಕಿಂತಲೂ ಮುಖ್ಯ ಎಂಬುದು ಕೇಂದ್ರ ಸರ್ಕಾರದ ಪರಮ ಧ್ಯೇಯವಾಗಿದೆ, ಇದಕ್ಕೆ ಸಮಗ್ರ ಭಾರತೀಯರೆಲ್ಲರ ಒಕ್ಕೊರಲಿನ ಬೆಂಬಲವೂ ದೇಶಾದ್ಯಂತ ಮೊಳಗುತ್ತಿದೆ.
ಈ ನಿಟ್ಟಿನಲ್ಲಿ ಪ್ರಾಣ ತೆತ್ತ ಅಮಾಯಕ ಜೀವಗಳ ಆತ್ಮಕ್ಕೆ ಶಾಂತಿ ನೀಡಲು, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು, ಮುಂದೆಂದೂ ಭಾರತ ಹಾಗೂ ಭಾರತೀಯರ ಮೇಲೆ ಚಿತಾವಣೆ, ಆಕ್ರಮಣಗಳು ನಡೆಯದಿರಲು ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸಬೇಕಾಗಿರುವುದು ಅಪ್ಪಟ ದೇಶಪ್ರೇಮಿ ಮುಖ್ಯಮಂತ್ರಿಗಳ ಆದ್ಯತೆಯಾಗಬೇಕಾಗಿರುವುದು ಕರುನಾಡಿನ ಜನರ ನಿರೀಕ್ಷೆ ಹಾಗೂ ಒತ್ತಾಯವಾಗಿದೆ.
ಇದನ್ನು ಮಾನ್ಯ ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.