ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ ಸಮುದಾಯಗಳ ಒಕ್ಕೂಟ ಬೃಹತ್ ಸಮಾವೇಶವನ್ನ ಅಯೋಜನೆ ಮಾಡಿದ್ದು, ಸಮಾವೇಶದಲ್ಲಿ ಭಾಗವಹಿಸಲು ದೊಡ್ಡಬಳ್ಳಾಪುರ ತಾಲೂಕಿನ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದೆ.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಮಾರ್ಚ್ 19ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನ ಅಯೋಜನೆ ಮಾಡಿದೆ, ಒಳಮಿಸಲಾತಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಲು ದೊಡ್ಡಬಳ್ಳಾಪುರ ತಾಲೂಕಿನ ಮಾದಿಗ ಸಮುದಾಯದ ಮುಖಂಡರು ಮತ್ತು ಪ್ರಮುಖರು ಬಸ್ ಗಳ ಮೂಲಕ ತೆರಳಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮುಖಂಡರಾದ ಬಚ್ಚಳ್ಳಿ ನಾಗರಾಜು , ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು, ಮಾದಿಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರು ರಾಜ್ಯ ಸರ್ಕಾರ ಆದೇಶವನ್ನು ಜಾರಿಗೆ ತರಲು ಮುಂದಾಗುತ್ತಿಲ್ಲ , ಮುಖ್ಯಮಂತ್ರಿಗಳು ಈ ಕೂಡಲೇ ಯಥಾವತ್ತಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಲಿ ಇಲ್ಲವೇ ಕುರ್ಚಿ ಖಾಲಿ ಮಾಡಲಿ ಎಂದು ಆಗ್ರಹಿಸಿದರು
ಮುಖಂಡರಾದ ರಾಮುಮೂರ್ತಿ ನೇರಳಘಟ್ಟ ಮಾತನಾಡಿ, ಒಳ ಮೀಸಲಾತಿಗಾಗಿ ಕಳೆದ 35 ವರ್ಷಗಳಿಂದ ನಾವು ಹೋರಾಟ ಮಾಡುತ್ತ ಬಂದಿದ್ದೇವೆ, ಹೋರಾಟದಲ್ಲಿ ಸಮುದಾಯದ ಮುಖಂಡರು ಬಲಿದಾನ ಮಾಡಿದ್ದಾರೆ, ಈಗಾಗಲೇ ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ, ಪಕ್ಕದ ರಾಜ್ಯದಲ್ಲಿ ಸಾಧ್ಯವಾಗಿರುವಾಗ, ರಾಜ್ಯ ಸರ್ಕಾರಕ್ಕೆ ಯಾಕೇ ಸಾಧ್ಯವಾಗಿಲ್ಲ, ಒಳ ಮೀಸಲಾತಿ ಜಾರಿಗಾಗಿ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ,
ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಯಥಾವತ್ತಾಗಿ ಸರ್ಕಾರ ಜಾರಿಗೊಳಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮಾಡಲಿ ಎಂದರು.
ಈ ವೇಳೆ ಸಮುದಾಯದ ಮುಖಂಡರಾದ ರಾಮಕೃಷ್ಣಪ್ಪ, ವೆಂಕಟೇಶ್, ಟಿ.ಡಿ.ಮುನಿಯಪ್ಪ, ಕಿ.ವಿ.ಮುನಿಯಪ್ಪ, ಚೆಲುವರಾಜು, ತಳವಾರ ನಾಗರಾಜು, ನಾರಸಿಂಹನಹಳ್ಳಿ ಗಂಗರಾಜು ಸೇರಿದಂತೆ ಹಲವು ಮುಖಂಡರಿದ್ದರು.