ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟಕವಿ, 8ಕ್ಕೂ ವಿಶ್ವ ವಿದ್ಯಾಲಯ ಗಳಿಂದ ಡಾಕ್ಟರೆಟ್ ಪದವಿ ಪಡೆದ ವಿಶ್ವಮಾನವ ಕುವೆಂಪು ಅವರ ಪುಣ್ಯಸ್ಮರಣೆಯ ಸವಿ ನಮನಗಳು. ಅವರ ಪುಣ್ಯಸ್ಮರಣೆಯ ಈ ದಿನವು ಕೇವಲ ಕವಿಯ ನೆನಪುಗಳ ದಿನವಲ್ಲ, ರಾಷ್ಟ್ರಕವಿಯ ಆತ್ಮವನ್ನು ಮತ್ತೆ ಜಾಗೃತಗೊಳಿಸುವ ಸುವರ್ಣ ದಿನವಾಗಿದೆ.
ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ, ಕುಪ್ಪಳ್ಳಿಯ ಪರಿಸರದಲ್ಲಿ ಜನಿಸಿದ ಕೆ. ವಿ. ಪುಟ್ಟಪ್ಪ ನವರು. ಮುಂದಿನ ಪೀಳಿಗೆಗಳಿಗೆ “ಕುವೆಂಪು” ಎಂಬ ನಾಮದಿಂದ ಪ್ರಸಿದ್ದಿಯಾದರು. ತನ್ನ ಸುತ್ತಮುತ್ತಲಿನ ಪ್ರಕೃತಿ ಮತ್ತು ತನ್ನಲ್ಲಿರುವ ಮಾನವೀಯತೆ ಮತ್ತು ಅವರ ಸಾಹಿತ್ಯ ಬದುಕಿನ ಒಂದು ಅಸ್ತಿತ್ವ. ಅವರ ಸಾಹಿತ್ಯದಲ್ಲಿ ಕಾಣುವುದು ಶಬ್ದಗಳಲ್ಲ ಬದಲಿಗೆ ಮನುಷ್ಯನ ಅಂತರಂಗದ ಸಂಗೀತದ ಭಾವನೆಗಳು / ಅಂಶಗಳು.
ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಕಾವ್ಯ ಕೇವಲ ರಾಮಾಯಣದ ಕಥನವಲ್ಲ, ಅದು ಮಾನವನ ಧರ್ಮ, ಕರ್ಮ ಮತ್ತು ಕರ್ತವ್ಯದ ದರ್ಶನ ಈ ಕೃತಿಯಲ್ಲಿದೆ. ಈ ಕೃತಿಯ ಮೂಲಕ ಅವರು ಮಾನವನ ಜೀವನವನ್ನು ಆಧ್ಯಾತ್ಮಿಕ ಚಿಂತನೆ ಮತ್ತು ವಿಜ್ಞಾನಗಳ ನಡುವೆ ಸೇತುವೆಯಂತೆ ನಿರ್ಮಿಸಿದರು. “ನಾವು ಎಲ್ಲರೂ ಮಾನವರಾಗೋಣ” ಎಂಬ ಅವರ ಆಲೋಚನೆ ಸಮಾಜಕ್ಕೆ ಶಾಶ್ವತವಾಗಿರುವಂತಹ ಸಂದೇಶವಾಗಿದೆ. ಕುವೆಂಪು ಅವರ ದೃಷ್ಟಿಯಲ್ಲಿ -ಪ್ರೀತಿ, ಸತ್ಯ, ದಯೆ, ಹಾಗೂ ಸಹಜ ಜೀವನವೇ ನಿಜವಾದ ಧರ್ಮ ಎಂದು ತಿಳಿಸಿಕೊಟ್ಟರು.
ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕುಲಪತಿಯಾಗಿ ಅವರು ಶಿಕ್ಷಣದಲ್ಲಿ ಹೊಸ ಚಿಂತನೆಯನ್ನು ಜಾರಿಗೆ ತಂದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಂಬಿಕೆ, ಸ್ವಾಭಿಮಾನ ಮತ್ತು ಎಲ್ಲರಲ್ಲಿಯೂ ಕನ್ನಡ ಪ್ರೇಮವನ್ನು ಬೆಳೆಸಿದರು.
ನನ್ನ ಸಣ್ಣ ಕವಿತೆಯ ಮೂಲಕ ಕುವೆಂಪು ಅವರಿಗೆ ನಮನಗಳು…
ತಮ್ಮ ಮಾತುಗಳಲ್ಲಿ ಬೆಳಕು ಚೆಲ್ಲಿ,
ನಮ್ಮ ಹೃದಯಕ್ಕೆ ದಾರಿ ತೋರಿ,
ಕಾವ್ಯದಲ್ಲಿ ನದಿಯ ಹರಿಸಿ,
ಕನ್ನಡಕ್ಕೆ ಜೀವ ತುಂಬಿದರು…
ಮಲೆನಾಡಿನಲ್ಲಿ ಸುಗಂಧ ಚೆಲ್ಲಿ,
ದಾರಿಯಲ್ಲಿ ಕವಿತೆ ಚೆಲ್ಲಿ,
ನಮ್ಮನ್ನ ತನ್ನ ಕಡೆ ಸೆಳೆದು
ನೆನಪಲ್ಲೇ ಬಿಟ್ಟು ಹೋದರಲ್ಲ
ನಮ್ಮ ಬಳಿ ನಮನ ಸಲ್ಲಿಸಿಕೊಳ್ಳಲು…

ಇಂದು ಕುವೆಂಪು ಪುಣ್ಯಸ್ಮರಣೆಯ ಸಂದರ್ಭದಲ್ಲಿ, ನಾವು ಅವರ ಚಿಂತನೆಗಳನ್ನು ಕೇವಲ ಓದುವಷ್ಟರಲ್ಲಿ ನಿಲ್ಲಬಾರದು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ, ಕವಿ ಕುವೆಂಪು ಅವರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ…
ಲೇಖನ:- ಹರಿಯಬ್ಬೆ ನಾಗಭೂಷಣ. ಡಿ

