ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ನೀಡುವುದೇ ದಸರೆಯ ಸಂದೇಶ. ವಿಜಯನಗರ ಅರಸರು ವಿಜಯದ ಸಂಕೇತವಾಗಿ ಪ್ರಾರಂಭಿಸಿರುವ ಆಯುಧಪೂಜೆ – ದಸರಾ ಉತ್ಸವವನ್ನು ಮೈಸೂರು ಒಡೆಯರ್ ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜನಪರವಾಗಿರುವ ನಮ್ಮ ಸರ್ಕಾರವನ್ನು ದುಷ್ಟರಿಂದ ರಕ್ಷಿಸು ಎಂದು ಜಾಹೀರಾತಿನ ಮೂಲಕ ಪ್ರಾರ್ಥಿಸಲಾಗಿದೆ. ಇದು ದಸರಾದ ಆಶಯವೂ ಆಗಿದೆ ಎಂದು ಸಿಎಂ ಜಾಹೀರಾತನ್ನು ಸಮರ್ಥಿಸಿಕೊಂಡಿದ್ದಾರೆ.
ಇಡೀ ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ. ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ?
ಇದು “ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ” ಹಾಗಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.