ರಸ್ತೆ ಅಗಲೀಕರಣ ಮಾಡಲು ಸೂಚನೆ ನೀಡಿದ ಸಚಿವರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಪಿ.ಬಿ ರಸ್ತೆ ಅಗಲೀಕರಣ ಕಾರ್ಯ ನಮ್ಮ ಅಧಿಕಾರ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕು. ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಹಾಗೂ ನಗರಸಭೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಬೇಕು ಎಂದು ಸಚಿವ ಡಿ.ಸುಧಾಕರ್ ಸಭೆಯಲ್ಲಿ ನಿರ್ದೇಶನ ನೀಡಿದರು.

ಸರ್ವೋಚ್ಚ ನ್ಯಾಯಾಲಯವೇ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೇ ರಸ್ತೆ ಅಗಲೀಕರಣಕ್ಕಾಗಿ ಮುಲಾಜು ತೋರದೆ ತೆರವುಗೊಳಿಸುವಂತೆ ಆದೇಶ ನೀಡಿದೆ. ಹಳೆಯ ಪಿ.ಬಿ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಾವುದೇ ಮುಲಾಜು ತೋರಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಚಳ್ಳಕೆರೆ ಹಾಗೂ ಹಿರಿಯೂರಿನಿಂದ ಚಿತ್ರದುರ್ಗ ನಗರ ಪ್ರವೇಶ ಮಾಡುವ ಪಿ.ಬಿ. ರಸ್ತೆ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಆಸ್ಪತ್ರೆಯವರೆಗೆ ಸಾಕಷ್ಟು ವಿಸ್ತಾರವಾಗಿದೆ. ಅದರೆ ನಗರದ ಮುಖ್ಯಭಾಗದಲ್ಲಿ ಒತ್ತುವಾರಿಯಾಗಿದೆ. ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ದಾವಣಗೆರೆ ಮಹಾನಗರ ಪಾಲಿಕೆ ಒತ್ತುವರಿಯಾಗಿದ್ದ ಪಿ.ಬಿ.ರಸ್ತೆಯನ್ನು ತೆರವುಗಳಿಸಿ ಕ್ರಮ ಕೈಗೊಂಡಿದೆ. ಚಿತ್ರದುರ್ಗ ನಗರಸಭೆ ಅಧಿಕಾರಿಗಳು ದಾವಣಗೆರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುವಂತೆ ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್ ಸಲಹೆ ನೀಡಿದರು.
1905
ರಲ್ಲಿ ನಗರದ ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗಿತ್ತು. ತದನಂತರ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಇದನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಹೆದ್ದಾರಿ ಅಗಲದ ಅಳೆತೆಯನ್ನು ಕಡಿಮೆ ಮಾಡಿಲ್ಲ.  ಒತ್ತುವರಿಯಾದ ರಸ್ತೆಯನ್ನು ಅಧಿಕಾರಿಗಳು ಗುರುತಿಸಬೇಕು. ಇದರೊಂದಿಗೆ ನಗರದ ರಾಜಕಾಲುವೆ ಮೇಲಿನ ನಿರ್ಮಾಣಗಳ ತೆರವಿಗೂ ಮುಂದಾಗಬೇಕು ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಸಂದರ್ಭದಲ್ಲಿ ಹೇಳಿದರು.

Share This Article
error: Content is protected !!
";