ಹೈಕೋರ್ಟ್ ತೀರ್ಪು ಕುರಿತು ಸಚಿವರ ಅಭಿಪ್ರಾಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ ಆದೇಶ ಹೊರಡಿಸಿದೆ. ಈ ಕುರಿತು ಹಲವು ಕಾಂಗ್ರೆಸ್​ ಸಚಿವರು ಸ್ವಾಗತಿಸಿದ್ದಾರೆ. ರಾಜಕೀಯ ಮಾಡುವುದೇ ವಿಪಕ್ಷಗಳ ಗುರಿಯಾಗಿತ್ತು ಎಂದು ಬಿಜೆಪಿ ವಿರುದ್ಧ ಸಚಿವರುಗಳು ವಾಗ್ದಾಳಿ ಮಾಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ಹೈಕೋರ್ಟ್ ತೀರ್ಪು ಕುರಿತು ಮಾತನಾಡಿ, ಈ ರೀತಿಯ ತೀರ್ಪನ್ನು ನಿರೀಕ್ಷೆ ಮಾಡಿದ್ದೆವು. ಲೋಕಾಯುಕ್ತದ ಮೇಲೆ ವಿಶ್ವಾಸವಿಟ್ಟು ಕೋರ್ಟ್ ಆದೇಶಿಸಿದೆ. ಲೋಕಾಯುಕ್ತ ವರದಿ ಸರಿಯಲ್ಲ ಅಂತ ಹೇಳಲು ಬರಲ್ಲ. ಅದಕ್ಕಾಗಿ ಪೀಠ ಈ ಆದೇಶ ಮಾಡಿದೆ. ಇ.ಡಿ ತನಿಖೆ ಬಗ್ಗೆ ಮುಂದೆ ನೋಡೋಣ. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳು ನ್ಯಾಯಯುತವಾಗಿರುತ್ತವೆ ಎಂದು ಅವರು ತಿಳಿಸಿದರು.

ಸಚಿವ ಹೆಚ್.ಸಿ.ಮಹದೇವಪ್ಪ ತೀರ್ಪು ಕುರಿತು ಪ್ರತಿಕ್ರಿಯಿಸಿ, ನಾವು ಕಾನೂನು ಗೌರವಿಸುತ್ತೇವೆ. ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾವಾಗಿದೆ. ಆದರೆ, ಈ ಕೇಸ್‌ನಲ್ಲಿ ರಾಜಕೀಯ ಮಾಡುವುದೇ ಅವರ ಗುರಿಯಾಗಿತ್ತು. ಆದರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾಗೊಳಿಸಿದೆ. ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು. ಅದೊಂದು ಸ್ವತಂತ್ರ ಸಂಸ್ಥೆ. ಇದನ್ನು ರಾಜಕೀಯ ಉದ್ದೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆ ಎಂದು ಸಚಿವರು ತಿಳಿಸಿದರು.

5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರ ಎಂಬ ಪ್ರಶ್ನೆಗೆ, ಇದಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಇದು ಸಿಎಂ ಅವರ ಜಾರಿತ್ರ್ಯ ಹರಣಗೊಳಿಸುವ ವಿರೋಧ ಪಕ್ಷಗಳ ಷಡ್ಯಂತ್ರ ಅಷ್ಟೇ ಎಂದರು.

ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಉಚ್ಚ ನ್ಯಾಯಾಲಯದ ಆದೇಶದ ಮೇಲೆ ಲೋಕಾಯುಕ್ತ ತನಿಖೆಗೆ ಮುಡಾ ಪ್ರಕರಣ ಕೊಡಲಾಗಿತ್ತು. ಸಿಬಿಐ ತನಿಖೆಗೆ ಕೇಳುವ ಅವಶ್ಯಕತೆ ಏನಿತ್ತು? ಇದು ಸಂಪೂರ್ಣ ರಾಜಕೀಯ ದುರುದ್ದೇಶ ಎಂದು ಆರೋಪಿಸಿದರು.

ವಿಪಕ್ಷದವರು ಸಿಬಿಐ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಲಾಗಿತ್ತು. ಇದು ದ್ವೇಷದ ರಾಜಕಾರಣ. ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದನ್ನು ನಾವು ಮೊದಲಿನಿಂದಲೂ ನೋಡ್ತಿದ್ದೇವೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು.

 ಸಿಎಂ ಕಾನೂನು ಸಲಹೆಗಾರ ಎಸ್.ಪೊನ್ನಣ್ಣ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ವಹಿಸುವುದಕ್ಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪುಗೆ ಸಿದ್ದರಾಮಯ್ಯ ಸಂತಸ ಗೊಂಡಿದ್ದಾರೆ. ಮುಡಾ ಹಗರಣದಲ್ಲಿ ನ್ಯಾಯಾಲಯ ಮೂರು ಅಂಶಗಳನ್ನು ಉಲ್ಲೇಖಿಸಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವಾಗ ಸಿಬಿಐಗೆ ಹಸ್ತಾಂತರ ಮಾಡುವಂತಹ ಅಂಶಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದರು.

ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಅಂತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಿಬಿಐಗೆ‌ವಹಿಸಲು ಕಾರಣವಾದ ಅಂಶಗಳು ಈ ಪ್ರಕರಣದಲ್ಲಿಲ್ಲ ಅಂತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಾನು ಇನ್ನೂ‌ತೀರ್ಪಿನ ಪ್ರತಿ ಓದಿಲ್ಲ. ಇ.ಡಿಯವರ ಎರಡೂ ನೋಟಿಸ್​ಗಳು ಕೋರ್ಟ್​ನಲ್ಲಿವೆ. ಯಾವುದೇ ತನಿಖೆಗೂ ನಾವು ಸಹಕಾರ ಕೊಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.

 

Share This Article
error: Content is protected !!
";