ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದುರದೃಷ್ಟವಶಾತ್, ಬ್ಯಾಂಕುಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ ‘ಕಲೆಕ್ಷನ್ ಏಜೆಂಟ್’ಗಳನ್ನಾಗಿ ಮಾಡಿಕೊಂಡಿದೆ. 2018 ಮತ್ತು 2024ರ ನಡುವೆ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಉಳಿತಾಯ ಖಾತೆಗಳು ಮತ್ತು ಜನ ಧನ ಖಾತೆಗಳಿಂದ ಕನಿಷ್ಠ ರೂ.43,500 ಕೋಟಿ ಸಂಗ್ರಹಿಸಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿ ವರ್ಷ ರೂ.100 ರಿಂದ ರೂ. 200 ನಿಷ್ಕ್ರಿಯತೆಯ ಶುಲ್ಕ, ಬ್ಯಾಂಕ್ ಸ್ಟೇಟ್ಮೆಂಟ್ ವಿತರಣೆಗೆ ರೂ. 50– ರೂ. 100, SMS ಎಚ್ಚರಿಕೆಗಳಿಗೆ ಪ್ರತಿ ತ್ರೈಮಾಸಿಕಕ್ಕೆ ರೂ. 20– ರೂ. 25 ಶುಲ್ಕ, ಎನ್ಇಎಫ್ಟಿ (NEFT), ಡಿಮ್ಯಾಂಡ್ ಡ್ರಾಫ್ಟ್ ಶುಲ್ಕಗಳ ಹೆಚ್ಚುವರಿ ಹೊರೆ. ಸಹಿ ಬದಲಾವಣೆಗಳಂತಹ ಕೆವೈಸಿ ನವೀಕರಣಗಳಿಗೂ ಶುಲ್ಕ ಹೀಗೆ ದೇಶದ ಜನರನ್ನು ಕೇಂದ್ರ ಸರ್ಕಾರ ಬ್ಯಾಂಕ್ ಶುಲ್ಕಗಳಿಂದ ಲೂಟಿ ಮಾಡಲಾಗುತ್ತಿದೆ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಹಿಂದೆ, ಕೇಂದ್ರ ಸರ್ಕಾರವು ಬ್ಯಾಂಕ್ ಶುಲ್ಕಗಳಿಂದ ಸಂಗ್ರಹಿಸಲಾದ ಮೊತ್ತದ ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ಒದಗಿಸುತ್ತಿತ್ತು. ಆದರೆ, ಈಗ ಆರ್ ಬಿ ಐ ಅಂತಹ ದತ್ತಾಂಶವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ಈ ಪದ್ಧತಿಯನ್ನು ಸಹ ನಿಲ್ಲಿಸಲಾಗಿದೆ. ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕ್ಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಅನುಮತಿ ನೀಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.