ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಳಿ ರಸ್ತೆಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು ಅಕ್ಷರಶಃ ನಿಜ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸ ಬರಿದಾಗಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಲೇ ಬಂದಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಗುತ್ತಿಗೆದಾರರಿಗೆ 64,000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಅವರು ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಳೆದ 20 ತಿಂಗಳುಗಳಲ್ಲಿ ಈವರೆಗೂ ಒಂದೇ ಒಂದು ಹೊಸ ಕಾಮಗಾರಿಗೂ ಗುದ್ದಲಿ ಪೂಜೆ ಮಾಡಿಲ್ಲ. ಈಗ ಬಿಲ್ ಬಾಕಿ ಪಾವತಿ ಮಾಡದಿದ್ದರೆ ಜಾರಿಯಲ್ಲಿರುವ ಕಾಮಗಾರಿಗಳೂ ನಿಲ್ಲುತ್ತವೆ. ಸರ್ಕಾರದ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುತ್ತವೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಅಧಿಕಾರದ ದುರಾಸೆಗೆ ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನ ಯಾವ ದುಸ್ಥಿತಿಗೆ ತಂದಿಟ್ಟಿದ್ದೀರಿ ನೋಡಿ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿ 16 ಬಜೆಟ್ ಮಂಡಿಸುವ ದಾಖಲೆ ಬರೆದರೇನು, ಎರಡೆರಡು ಬಾರಿ ಮುಖ್ಯಮಂತ್ರಿ ಆದರೇನು? ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಸಿಎಂ ಎಂದೇ ಇತಿಹಾಸ ತಮ್ಮನ್ನ ನೆನಪಿಡುವುದು ಎಂದು ಅಶೋಕ್ ಎಚ್ಚರಿಸಿದ್ದಾರೆ.