ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ! ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಟೀಕಾ ಪ್ರಹಾರ ಮಾಡಿದೆ.
ಅದಕ್ಷ ಸಿದ್ದರಾಮಯ್ಯ ಸರ್ಕಾರ ಒಂದು ಕಡೆ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ, ಮತ್ತೊಂದು ಕಡೆ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸುವಲ್ಲಿಯೂ ಸಂಪೂರ್ಣ ವಿಫಲವಾಗಿದೆ.
ಶಾಲಾ ಮಕ್ಕಳ ತರಗತಿಗೆ ಕೊಠಡಿಗಳನ್ನು ಮಂಜೂರಾತಿ ಮಾಡಿ ಎಂದು ಆಗ್ರಹಿಸಿದ್ದಕ್ಕೆ ಮುಖ್ಯ ಶಿಕ್ಷಕನಿಗೆ ಅಮಾನತು ಶಿಕ್ಷೆ ವಿಧಿಸಿರುವ “ಹಿಟ್ಲರ್ ಕಾಂಗ್ರೆಸ್” ಸರ್ಕಾರದ ನಡೆ ಖಂಡನೀಯ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳನ್ನು ಹಾಗೂ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವಂತೆ ಕೋರಿ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಕಲಕೇರಿ, ಕಾಲ್ನಡಿಗೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯವರೆಗೆ ಜಾಥಾ ಕೈಗೊಂಡಿದ್ದರು.
ಇದು ಮಹಾಪರಾಧವೇ ಸಚಿವ ಮದು ಬಂಗಾರಪ್ಪ ಅವರೇ ? ಶಿಕ್ಷಣ ಸಚಿವರಾಗಿ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ, ಆ ಮುಖ್ಯ ಶಿಕ್ಷಕ ಶಾಲಾ ಮಕ್ಕಳಿಗಾಗಿ ಕಾಲ್ನಡಿಗೆ ಜಾಥಾ ಯಾಕೆ ಮಾಡುತ್ತಿದ್ದರು? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯ ಸರ್ಕಾರ ಈ ಕೂಡಲೆ ಮುಖ್ಯ ಶಿಕ್ಷಕರಾದ ವೀರಣ್ಣ ಕಲಕೇರಿ ಅವರ ಅಮಾನತು ಆದೇಶವನ್ನು ರದ್ದುಪಡಿಸಬೇಕು ಹಾಗೂ ಆ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡಬೇಕು ಎಂದು ಜೆಡಿಎಸ್ ಪಕ್ಷ ಆಗ್ರಹಿಸಿದೆ.