ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರಸಭೆಯಲ್ಲಿ ಜನನ ಪ್ರಮಾಣ ಪತ್ರ ವಿತರಿಸಲು ಹೆಲ್ತ್ ಇನ್ಸ್ಪೆಕ್ಟರ್ ಒಬ್ಬರು ಫೋನ್ ಪೇ ಮೂಲಕ 1400 ರೂಗಳನ್ನು ಹಣ(ಲಂಚ) ಪಡೆದು ಯಾವುದೇ ರಸೀದಿ ನೀಡದೆ ತಮ್ಮ ವಯಕ್ತಿಕ ಖಜಾನೆ ತುಂಬಿಸಿ ಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೊಡ್ಡಬಳ್ಳಾಪುರ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ನಗರದ ನಗರಸಭೆ ಕಚೇರಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರಗಳ ವಿತರಣೆ ಮಾಡುವ ಅಧಿಕಾರಿಯೊಬ್ಬರು ನಿನ್ನೆ ಮಧ್ಯಾಹ್ನದ ಸುಮಾರಿಗೆ ಫೋನ್ ಪೇ ಮೂಲಕ 1400 ಪಡೆದಿದ್ದು, ಕಾನೂನು ಬದ್ಧವಾಗಿ 400 ರೂ.ಗಳನ್ನು ಪಡೆಯಬೇಕಿದ್ದ ಅಧಿಕಾರಿ 1400 ಗಳನ್ನು ಪಡೆದಿದ್ದು, ಈ ಕುರಿತಂತೆ ಯಾವುದೇ ನಗದು ರಶೀದಿ ಕೂಡ ನೀಡಿಲ್ಲ, ಸ್ಥಳೀಯ ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳು ಈ ಕುರಿತು ಪ್ರಶ್ನೆ ಮಾಡಿದಾಗ ಅಧಿಕಾರಿ ಒಪ್ಪಿಕೊಂಡಿದ್ದು ಹಣ ಹಿಂದಿರುಗಿಸಲು ಮುಂದಾಗಿದ್ದಾರೆ. ಸಂಪೂರ್ಣ ಮಾತುಕತೆ ವಿಡಿಯೋ ಮಾಡಿರುವ ಕೆ ಆರ್ ಎಸ್ ಪಕ್ಷವು ತನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧಿಕೃತ ಗ್ರೂಪ್ ನಲ್ಲಿ ವಿಡಿಯೋ ಹಂಚಿಕೊಂಡಿದೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವಶಂಕರ್ ಮಾತನಾಡಿ ನಗರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹಲವಾರು ಬಾರಿ ನಾವು ಪ್ರತಿಭಟನೆ ಮಾಡಿ,ತಿಳುವಳಿಕೆ ನೀಡಿದರು ಅರಿತುಕೊಳ್ಳದ ಅಧಿಕಾರಿಗಳು ತಮ್ಮ ದುರಾಸೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಸ್ಥಳೀಯ ಆಡಳಿತ ಈ ಕುರಿತು ಗಮನ ಹರಿಸಬೇಕಿದೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕಿದ್ದು ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಭ್ರಷ್ಟಾಚಾರ ಮುಕ್ತ ಸೇವೆ ಕಲ್ಪಿಸುವಂತಾಗಲಿ ಎಂದರು.
ನಮ್ಮ ಕೆಆರ್‌ಎಸ್ ಪಕ್ಷವು ಸಾರ್ವಜನಿಕರ ಧ್ವನಿಯಾಗಿ ನಿರಂತರ ಹೋರಾಟದಲ್ಲಿ ತೊಡಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸದಾ ಪ್ರತಿಭಟಿಸುತ್ತೇವೆ , ಲಂಚಮುಕ್ತ ಸಮಾಜದ ನಿರ್ಮಾಣಕ್ಕೆ ಸದಾ ಶ್ರಮಿಸುತ್ತೇವೆ ಎಂದರು.
ಸರ್ಕಾರವು ಸಾವಿರಗಟ್ಟಲೆ ಸಂಬಳ ನೀಡುತ್ತಿದ್ದರು ಇಂತಹ ನೀಚ ಕೃತ್ಯಗಳಿಗೆ ಪಾಲಾಗುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ ನಗರಸಭೆಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಹಣ ಅಂಶಗಳಿಗೆ ಒಳಗಾಗದೆ, ಬಯಸದೇ ಸಾರ್ವಜನಿಕರ ಸೇವೆಗೆ ಮುಂದಾಗಲಿ ಎಂಬುದೇ ನಮ್ಮ ಆಶಯ ಎಂದು ಅವರು ತಿಳಿಸಿದ್ದಾರೆ.