ಲಕ್ಷಾಂತರ ಕುಟುಂಬಗಳ ಒಂದೇ ಪ್ರಶ್ನೆ ರೆವಿನ್ಯೂ ನಿವೇಶನಗಳಿಗೆ ಖಾತಾ ನೀಡುವುದು ಯಾವಾಗ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಕ್ಷಾಂತರ ಕುಟುಂಬಗಳ ಪ್ರಶ್ನೆ ರೆವಿನ್ಯೂ ನಿವೇಶನಗಳಿಗೆ ಖಾತಾ ಯಾವಾಗ?

ಲಕ್ಷಾಂತರ ಮನೆಗಳ ಮೇಲೆ ಕಾನೂನು ನೆರಳುರೆವಿನ್ಯೂ ನಿವೇಶನಗಳಿಗೆ ಖಾತಾ ಯಾವಾಗ?”. ಆಶ್ವಾಸನೆಗಳ ರಾಜಕೀಯ ಸಾಕುರಿವಿನ್ಯೂ ನಿವೇಶನ ಮಾಲೀಕರಿಗೆ ನ್ಯಾಯ ಯಾವಾಗ?”.

- Advertisement - 

ಜೀವನಪೂರ್ತಿ ದುಡಿದು ಖರೀದಿಸಿದ ನಿವೇಶನಖಾತಾ ಇಲ್ಲದೆ ನಾಗರಿಕನ ಹಕ್ಕು ಎಲ್ಲಿದೆ?”

ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾದ ಲಕ್ಷಾಂತರ ಕುಟುಂಬಗಳುರೆವಿನ್ಯೂ ನಿವೇಶನ ಸಮಸ್ಯೆಗೆ ಪರಿಹಾರ ಯಾವಾಗ?”

- Advertisement - 

ಕಾಗದದಲ್ಲೇ ಸಿಲುಕಿದ ಕನಸುಗಳ ಮನೆಗಳುರೆವಿನ್ಯೂ ನಿವೇಶನಗಳಿಗೆ ಖಾತಾ ನೀಡುವ ದಿನ ಯಾವಾಗ?” ಎಂದು ರೆವಿನ್ಯೂ ನಿವೇಶನ ಖರೀದಿಸಿರುವ ಮಾಲೀಕರುಗಳ ಆತಂಕದ ಪ್ರಶ್ನೆಯಾಗಿದೆ.

ಆಶ್ವಾಸನೆಗಳ ರಾಜಕೀಯ ಸಾಕುಜನರ ಬದುಕಿನೊಂದಿಗೆ ಆಟ ಬೇಡ! ರಾಜ್ಯದ ಲಕ್ಷಾಂತರ ಕುಟುಂಬಗಳ ಕನಸುಗಳು ಒಂದು ಕಾಗದದ(ಖಾತಾ) ಕೊರತೆಯಿಂದ ಸಿಲುಕಿಕೊಂಡಿವೆ. ಆ ಕಾಗದದ ಹೆಸರು ಖಾತಾ.

ಕಳೆದ ಹಲವು ವರ್ಷಗಳಿಂದ ಕೃಷಿ ಭೂಮಿಗಳನ್ನು ಯಾವುದೇ ಸರಿಯಾದ ಪರಿವರ್ತನೆ ಅಥವಾ ಅಧಿಕೃತ ಅನುಮೋದನೆ ಇಲ್ಲದೆ ಅಕ್ರಮವಾಗಿ ರೆವಿನ್ಯೂ ಲೇಔಟ್‌ಗಳಾಗಿ ವಿಭಜಿಸಿ ಮಾರಾಟ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಹಲವಾರು ತಪ್ಪುಗಳು ನಡೆದಿದ್ದರೂ ಅದರ ಪರಿಣಾಮವನ್ನು ಎದುರಿಸುತ್ತಿರುವವರು ಸಾಮಾನ್ಯ ನಾಗರಿಕರು.

ತಮ್ಮ ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣವನ್ನು ಬಳಸಿ ಚಿಕ್ಕದೊಂದು ನಿವೇಶನ ಖರೀದಿಸಿದ ಜನರು, ತಮ್ಮದೇ ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕು ಅನುಭವಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಇದು ಕೇವಲ ಒಂದು ಆಡಳಿತಾತ್ಮಕ ಸಮಸ್ಯೆಯಲ್ಲ. ಇದು ಸಾಮಾನ್ಯ ಜನರ ಕನಸುಗಳ ಮನೆ, ಪರಿಶ್ರಮದ ಹಣ ಮತ್ತು ಬದುಕಿನ ಭದ್ರತೆಯ ಪ್ರಶ್ನೆ. ಬೆಂಗಳೂರು ಸುತ್ತಮುತ್ತ ಈಗಾಗಲೇ ಲಕ್ಷಾಂತರ ಮನೆಗಳು ಈ ರೆವಿನ್ಯೂ ನಿವೇಶನಗಳ ಮೇಲೆ ನಿರ್ಮಾಣವಾಗಿವೆ.

ಲಕ್ಷಾಂತರ ಕುಟುಂಬಗಳು ವರ್ಷಗಳಿಂದ ಅಲ್ಲೇ ವಾಸಿಸುತ್ತಿವೆ. ಆದರೂ ಅವರಿಗೆ ಕಾನೂನುಬದ್ಧ ಖಾತಾ ಇಲ್ಲ. ಸರ್ಕಾರಗಳು ಬದಲಾಗುತ್ತಿವೆ. ಸಭೆಗಳು ನಡೆಯುತ್ತಿವೆ. ಘೋಷಣೆಗಳು ಬರುತ್ತಿವೆ. ಆದರೆ ಜನರಿಗೆ ಸಿಗುತ್ತಿರುವುದು ಮಾತ್ರ ರಾಜಕೀಯದ ಆಶ್ವಾಸನೆಗಳು.

ಇದಕ್ಕಿಂತಲೂ ದೊಡ್ಡ ಸಂಕಷ್ಟ ಏನೆಂದರೆ 2024ರ ಸೆಪ್ಟೆಂಬರ್ ತಿಂಗಳಿಂದ ರೆವಿನ್ಯೂ ನಿವೇಶನಗಳ ನೋಂದಣಿ ಪ್ರಕ್ರಿಯೆಯೇ ಸ್ಥಗಿತಗೊಂಡಿದೆ.
ಇದರ ಪರಿಣಾಮವಾಗಿ ಲಕ್ಷಾಂತರ ಕುಟುಂಬಗಳು:
ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂದರೆ ಸಾಮಾನ್ಯ ನಾಗರಿಕನ ಆಸ್ತಿ ಕಾಗದದಲ್ಲೇ ಸಿಲುಕಿಕೊಂಡಿದೆ.

ಇದಕ್ಕೆ ಮತ್ತೊಂದು ಪ್ರಮುಖ ಅಡೆತಡೆ ಎಂದರೆ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶ. ಡಿಜಿಟಲ್ ವ್ಯವಸ್ಥೆ ಜನರ ಕೆಲಸ ಸುಲಭಗೊಳಿಸಲು ಇರಬೇಕು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿರುವ ಅನೇಕ ತಾಂತ್ರಿಕ ದೋಷಗಳು ರೆವಿನ್ಯೂ ನಿವೇಶನಗಳ ಖಾತಾ ಪ್ರಕ್ರಿಯೆಗೆ ದೊಡ್ಡ ಅಡ್ಡಿಯಾಗಿರುವುದು ಸ್ಪಷ್ಟವಾಗಿದೆ.

ದಾಖಲೆಗಳ ಹೊಂದಾಣಿಕೆ ಸಮಸ್ಯೆಗಳು, ತಂತ್ರಾಂಶದ ದೋಷಗಳು ಹಾಗೂ ಪ್ರಕ್ರಿಯೆಯ ಗೊಂದಲಗಳಿಂದಾಗಿ ಸಾವಿರಾರು ಅರ್ಜಿಗಳು ಅಟಕಾಸಿಕೊಂಡಿವೆ. ಇದರ ಪರಿಣಾಮವಾಗಿ ಈಗಾಗಲೇ ಸಂಕಷ್ಟದಲ್ಲಿರುವ ರೆವಿನ್ಯೂ ನಿವೇಶನ ಮಾಲೀಕರಿಗೆ ಇನ್ನಷ್ಟು ಅನಿಶ್ಚಿತತೆ ಮತ್ತು ವಿಳಂಬ ಎದುರಾಗುತ್ತಿದೆ.

ಇಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ ಅಕ್ರಮ ಲೇಔಟ್‌ಗಳನ್ನು ನಿರ್ಮಿಸಿದವರು ಯಾರು? ಅವುಗಳನ್ನು ವರ್ಷಗಳ ಕಾಲ ನಡೆಯಲು ಅವಕಾಶ ನೀಡಿದವರು ಯಾರು? ಆ ತಪ್ಪುಗಳ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿರುವಾಗ, ಅದರ ಶಿಕ್ಷೆಯನ್ನು ಸಾಮಾನ್ಯ ಜನರು ಅನುಭವಿಸುವುದು ಯಾವ ನ್ಯಾಯ?

ಸರ್ಕಾರ ಈ ಸಮಸ್ಯೆಯನ್ನು ಕೇವಲ ಕಾನೂನು ವಿಷಯವಾಗಿ ನೋಡುವುದನ್ನು ಬಿಟ್ಟು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟವಾಗಿ ಪರಿಗಣಿಸಬೇಕು. ಜನರು ಕೇಳುತ್ತಿರುವುದು ಯಾವುದೇ ವಿಶೇಷ ಅನುಗ್ರಹವಲ್ಲ. ತಮ್ಮ ಕಾನೂನುಬದ್ಧ ಹಕ್ಕನ್ನು ಮಾತ್ರ.

ಹೀಗಾಗಿ ಸರ್ಕಾರ ತಕ್ಷಣವೇ: ಕಾವೇರಿ 2.0 ತಂತ್ರಾಂಶದಲ್ಲಿರುವ ದೋಷಗಳನ್ನು ಸರಿಪಡಿಸಬೇಕು. ರೆವಿನ್ಯೂ ನಿವೇಶನಗಳ ಖಾತಾ ಪ್ರಕ್ರಿಯೆಗೆ ಸ್ಪಷ್ಟ ಹಾಗೂ ಸರಳ ಮಾರ್ಗಸೂಚಿ ರೂಪಿಸಬೇಕು. ವರ್ಷಗಳಿಂದ ಸಂಕಷ್ಟದಲ್ಲಿರುವ ಜನರಿಗೆ ಪಾರದರ್ಶಕ ಮತ್ತು ವೇಗವಾದ ಪರಿಹಾರ ನೀಡಬೇಕು. ಇಲ್ಲವಾದರೆ ಈ ಪ್ರಶ್ನೆ ಕೇವಲ ಆಡಳಿತದ ವಿಳಂಬವಾಗಿಯೇ ಉಳಿಯುವುದಿಲ್ಲ ಇದು ಲಕ್ಷಾಂತರ ಕುಟುಂಬಗಳ ಕನಸುಗಳನ್ನು ಕುಗ್ಗಿಸುವ ಅನ್ಯಾಯವಾಗುತ್ತದೆ.
ಇಂದು ಬೆಂಗಳೂರು ಜನರು ಕೇಳುತ್ತಿರುವ ಪ್ರಶ್ನೆ ಒಂದೇ
ಜನರ ಕನಸುಗಳ ಮನೆಗಳಿಗೆ ಕಾನೂನು ರಕ್ಷಣೆ ಯಾವಾಗ? ರೆವಿನ್ಯೂ ನಿವೇಶನಗಳಿಗೆ ಖಾತಾ ಯಾವಾಗ?. ಸರ್ಕಾರ 6ನೇ ಗ್ಯಾರಂಟಿ ನೀಡುವುದೇ ಕಾದು ನೋಡಬೇಕಿದೆ.
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

Share This Article
error: Content is protected !!
";