ಚಂದ್ರವಳ್ಳಿ ನ್ಯೂಸ್, ಮೈಸೂರು:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದವನ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿಗೆ ಅವಮಾನ ಮಾಡಲಾಗಿದೆ. ರಾಹುಲ್ ಗಾಂಧಿಯನ್ನು ವ್ಯಂಗ್ಯ ಮತ್ತು ಅಶ್ಲೀಲವಾಗಿ ಬಿಂಬಿಸಲಾಗಿದೆ. ಪೋಸ್ಟ್ ಹಾಕಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ಎಂ.ಲಕ್ಷ್ಮಣ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ. ಲಕ್ಷ್ಮಣ ಮೈಸೂರಿನಲ್ಲಿ ನಡೆದಿರುವ ಕಲ್ಲು ತೂರಾಟದ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಇದ್ದಾರೆ. ಪ್ರತಾಪ್ ಸಿಂಹರನ್ನು ಬಂಧಿಸಬೇಕು. ಗಲಾಟೆ ಹಿಂದೆ ಬಿಜೆಪಿ, ಆರ್ಎಸ್ಎಸ್ ಕೈವಾಡವಿದೆ. ವೇಷ ಬದಲಾಯಿಸಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕಾಗಿ ಆರ್ಎಸ್ಎಸ್ನ 300 ಜನ ಮೈಸೂರಿಗೆ ಬಂದಿದ್ದಾರೆ. ಕಲ್ಲು ತೂರಾಟ ಮಾಡಿದವರಿಗೆ ಕಂಡಲ್ಲೇ ಗುಂಡು ಹಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದುಬಿಜೆಪಿ ನಾಯಕರ ಉದ್ದೇಶ. ಪ್ರತಾಪ್ ಸಿಂಹ ಓಡಿ ಹೋಗುವ ಮುನ್ನ ಕೂಡಲೇ ಬಂಧಿಸಬೇಕು. ಬಿಜೆಪಿಯ ಯಾವ ನಾಯಕರನ್ನೂ ಮೈಸೂರಿಗೆ ಬರಲು ಬಿಡಬಾರದು. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಇಲ್ಲಿಗೆ ಏಕೆ ಬರಬೇಕು? ಪ್ರತಾಪ್ ಸಿಂಹ ಬೆಂಬಲಿಗ ಸುರೇಶ್ ಪೋಸ್ಟ್ ಹಾಕಿದ್ದಾನೆ, ಆತ RSS ಕಾರ್ಯಕರ್ತ. ಪ್ರತಾಪ್ ಸಿಂಹಗೆ ಯಾಕೆ ಮುಸ್ಲಿಮರ ಮೇಲೆ ಅಷ್ಟು ಕೋಪ? ಮುಸ್ಲಿಮರು ಈ ದೇಶದ ಮಣ್ಣಿನ ಮಕ್ಕಳು, ಅವರೇನು ಹೊರದೇಶದವರಾ? ಎಂದು ಲಕ್ಷ್ಮಣ್ ಖಾರವಾಗಿ ಪ್ರಶ್ನಿಸಿದರು.
ವ್ಯಂಗ್ಯ ಮಾಡಿ ಹಾಕಿದ್ದ ಪೋಸ್ಟ್?
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರುಗಳ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದನು. ಅಲ್ಲದೆ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆದಿದ್ದನು. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ದೂರು ನೀಡಿದ್ದಾರೆ.
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಉದ್ರಿಕ್ತರು-ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂ ಪ್ರೇರಿತ ಕೇಸ್‌ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಕ್ಷಣ ಒಂದು ಕೋಮಿನವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದರು. ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಪೊಲೀಸರು ಪದೇ ಪದೇ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿದ್ದ ಗುಂಪು ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು.