ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಕೇಸ್ನಲ್ಲಿ ಬಿಜೆಪಿ ನಾಯಕ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಯಾವುದೇ ನೋಟಿಸ್ ನೀಡದೆ ಬಂಧಿಸಿದ ಕಾರಣ ಸಿ.ಟಿ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಹೀಗಾಗಿ ಬೆಳಗಾವಿಯಿಂದ ಬೆಂಗಳೂರು ಕೋರ್ಟ್ಗೆ ಕರೆದುಕೊಂಡು ಬರುತ್ತಿದ್ದ ಪೊಲೀಸರು ಮಾರ್ಗ ಮಧ್ಯೆಯೇ ಸಿಟಿ ರವಿ ಅವರನ್ನು ತಮ್ಮ ವಶದಿಂದ ಬಿಡುಗಡೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ನಾಯಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿ. ಟಿ. ರವಿ ನನಗೆ ಹೈಕೋರ್ಟ್ ಜಾಮೀನು ನೀಡಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದೆ. ಕಾನೂನು ಪಾಲಿಸುವ ಪೊಲೀಸರೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಾನು ನಿನ್ನೆ ಅನುಭವಿಸಿದ ಸಂಕಷ್ಟವನ್ನು 35 ವರ್ಷಗಳ ಹಿಂದೆಯೇ ಅನುಭವಿಸಿದ್ದೆ. ಇದೆಲ್ಲಾ ಹೊಸತಲ್ಲಾ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನನ್ನ ಪರ ನಿಂತ ಪಕ್ಷದ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವುದಾಗಿ ರವಿ ಅವರು ತಿಳಿಸಿದರು.
ಮುಂದುವರೆದು ಮಾತನಾಡಿ ಸಿ.ಟಿ. ರವಿ, ರಾತ್ರಿಯಿಡಿ ನನ್ನನ್ನು ಟೆರರಿಸ್ಟ್ ರೀತಿ ನೋಡಿದ್ರು. ನಾನು ಖಾನಾಪುರದಲ್ಲಿ ದೂರು ಕೊಟ್ಟರೂ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಳ್ಳಲಿಲ್ಲ. ನಾನು ಸಭಾಪತಿಗಳಿಗೂ ದೂರು ನೀಡಿದ್ದೆ. ಸದನದಲ್ಲಿ ಏನೇ ಆದರೂ ಸಭಾಪತಿಗಳು ನೋಡಿಕೊಳ್ಳುತ್ತಾರೆ.
ಆದರೆ ಸುಳ್ಳು ಕೇಸ್ ಹಾಕಿಸಿ ನನ್ನನ್ನು ಬಂಧಿಸಿದ್ದಾರೆ. ನನ್ನ ವಿರುದ್ದ ಸಾಕ್ಷ್ಯಾದಾರ ಇಲ್ಲದಿದ್ದರೂ ನನ್ನ ವಿರುದ್ದ ಎಫ್ಐಆರ್ ಹಾಕಿದ್ದಾರೆ. ಗುರುವಾರ ಇಡೀ ರಾತ್ರಿ ಸುತ್ತಾಡಿಸುವ ಮೂಲಕ ಮಾನಸಿಕವಾಗಿ ಟಾರ್ಚರ್ ನೀಡಿದ್ದಾರೆ ಎಂದು ಆರೋಪಿಸಿದರು. ರಾಜಕೀಯ ಸೈದ್ದಾಂತಿಕವಾಗಿ ನಾನು ಟೀಕೆ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ. ಡಿಕೆ ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬೆಳಗಾವಿಯಲ್ಲಿ ಕೇಳಿ ತಿಳಿದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸರ್ಕಾರವನ್ನು ಟೀಕಿಸಿದ್ದರಿಂದ ಸಿ.ಟಿ. ರವಿ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಇದು ಬೆಚ್ಚಿ ಬೀಳಿಸುವ ಘಟನೆಯಾಗಿದ್ದು, ಮುಂದೆ ಹೋರಾಟ ಮಾಡುತ್ತೇವೆ. ಪೊಲೀಸ್ ಕಮಿಷನರ್, ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇವೆ. ನಮ್ಮದು ಅಬ್ಬೇಪಾರಿ ಪಕ್ಷ ಅಲ್ಲ ಎಂದು ಅಶೋಕ್ ಗುಡುಗಿದರು.