ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶುಶ್ರೂಷಕರ ವೃತ್ತಿ ಪವಿತ್ರವಾದದ್ದು, ನಿಸ್ವಾರ್ಥ ಸೇವೆ ಮೂಲಕ ಪ್ರತಿಯೊಬ್ಬರೂ ದೊಡ್ಡ ಮಟ್ಟಕ್ಕೇರಲು ಸಾಧ್ಯವಿದೆ ಎಂದು ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಹೇಳಿದರು.
ಇಲ್ಲಿನ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ, ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಚಿತ್ರದುರ್ಗ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರಮಜೀವನದಿಂದ ಮಾತ್ರ ಮಾನವನ ಬದುಕು ಸಾರ್ಥಕವಾಗುತ್ತದೆ. ಪದವಿಯಿಂದಷ್ಟೆ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ಶುಶ್ರೂಷಕರ ವೃತ್ತಿ ಪವಿತ್ರವಾದದ್ದು. ರೋಗಿಯ ಆತ್ಮ ವಿಶ್ವಾಸ ಉತ್ತಮಪಡಿಸುವಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ತರವಾದುದು. ಮಾನವೀಯ ಅಂತಃಕರಣದ ಸ್ಪಂದನ, ಮೃದು ಮಾತುಗಳು ರೋಗಿಯ ಮಾನಸಿಕ ಸ್ವಾಸ್ಥ್ಯ ಕಾಪಾಡ ಬಲ್ಲದು ಎಂದು ಅವರು ತಿಳಿಸಿದರು.
ಕೋರ್ಸ್ ಮುಗಿಸಿ ಹೊರ ಹೋಗುತ್ತಿರುವ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಕೋವಿಡ್ ನಂತರದ ಪರಿಸ್ಥಿತಿ ಅವಲೋಕನ ಮಾಡಿದರೆ ಪ್ರತಿ ಕುಟುಂಬದಲ್ಲೂ ಓರ್ವರು ನರ್ಸಿಂಗ್ ಓದುವುದು ಅಗತ್ಯ ಎನಿಸಿದೆ. ಏಕೆಂದರೆ ಇಂದು ನಾನಾ ರೀತಿಯ ರೋಗಗಳು ಜನರನ್ನು ಕಾಡುತ್ತಿವೆ. ಓರ್ವ ನರ್ಸಿಂಗ್ ಓದಿದರೆ ಮನೆಯಲ್ಲಿ ಒಬ್ಬರು ವೈದ್ಯರಿದ್ದಂತೆ ಹಾಗಾಗಿ ಕುಟುಂಬಕ್ಕೊಬ್ಬರು ನರ್ಸಿಂಗ್ ಓದಬೇಕು ಎಂದು ಅವರು ಸಲಹೆ ನೀಡಿದರು.
ಕೋರ್ಸ್ ಮುಗಿಸಿ ಹೊರ ಹೋಗುತ್ತಿರುವವರು ವೃತ್ತಿ ಬದ್ಧತೆ ಇಟ್ಟುಕೊಳ್ಳಬೇಕು, ಸೇವೆ ಮರೆಯಬಾರದು. ತಾಳ್ಮೆ ಇಟ್ಟುಕೊಂಡು ಸೇವೆ ಮಾಡುವ ಮನಸ್ಥಿತಿ ರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆರ್.ಮಂಜುಳ ಮಾತನಾಡಿ, ತಾವು ಓದಿದ ವಿಷಯ ಹಾಗೂ ವೃತ್ತಿ ಪರಿಣತಿ ಗಳಿಸಿಕೊಳ್ಳಲು ಪ್ರತಿಯೊಬ್ಬರೂ ಸದಾ ಮುಂದಿರಬೇಕುಎಂದು ಸಲಹೆ ನೀಡಿದರು.
ಸಮಾಜ ಸೇವೆ ಮಾಡಲು ಸಿಗುವ ಅವಕಾಶಗಳು ಯಾವುದೇ ಸಮಯದಲ್ಲಿ ಬಂದರೂ ಅದನ್ನು ನಿರಾಕರಿಸಬಾರದು. ಹೃದಯದಲ್ಲಿ ಅನುಕಂಪ, ಕರುಣೆ, ಮುಖದಲ್ಲಿ ಪ್ರಸನ್ನ ಭಾವದೊಂದಿಗೆ ರೋಗಿಗಳಿಗೆ ಉಪಚರಿಸು ವಂತಾದರೆ, ರೋಗ ನಿವಾರಣೆಯಾಗುತ್ತದೆ. ಉಪಚಾರ ಮಾಡುವಾಗ ಯಾವುದೇ ಭೇದ ಭಾವ ಮಾಡದೇ ಸಮಾನಭಾವದಿಂದ ನೋಡಬೇಕು. ರೋಗಿಗಳ ನೋವು ನಿವಾರಿಸುವಂಥದ್ದು ಪವಿತ್ರ ಕಾರ್ಯ. ರೋಗಿಗಳಿಗೆ ಮಾತೃ ಪ್ರೇಮ ತೋರಬೇಕು. ವೈದ್ಯರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿಯೂ ಶುಶ್ರೂಷಕಿಯರ ಪಾತ್ರ ಹಿರಿದಾದುದು ಎಂದು ಅವರು ಹೇಳಿದರು.
ಗುಣಮಟ್ಟ, ಶುಚಿತ್ವ, ಶಿಸ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ರೋಗಿಗಳ ಎಲ್ಲಾ ರೀತಿಯ ಚಿಕಿತ್ಸೆಯ ನಿಜವಾದ ವಾರಸುದಾರರು ಶುಶ್ರೂಷಕಿಯರು. ಕಾಲ ಕಾಲಕ್ಕೆ ಶುಶ್ರೂಷಿಕಿಯರು ನಗುತ್ತಾ ಕೆಲಸ ಮಾಡಿದರೆ ಅರ್ಧ ಕಾಯಿಲೆಯೇ ಗುಣವಾಗುತ್ತದೆ. ಆತ್ಮವಿಶ್ವಾಸ ಬಹಳಷ್ಟು ರೋಗಕ್ಕೆ ಮದ್ದು. ನರ್ಸ್ ಗಳ ಸೇವಾ ಮನೋಭಾವ ಮತ್ತು ನಗು ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಿ ಗುಣಮುಖರಾಗಲು ನೆರವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿರಿಯ ಉಪನ್ಯಾಸಕಿ ವಿ.ಎಸ್.ಪೋತದಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ರಂಗಭೂಮಿ ಕಲಾವಿದ ಹೆಚ್.ಬಿ.ಓಬಳೇಶ್ ಸನ್ಮಾನಿತರಾಗಿ ಮಾತನಾಡಿದರು.
ನರ್ಸಿಂಗ್ ಕೋರ್ಸ್ ಮುಗಿಸಿ ಹೊರ ಹೋಗುತ್ತಿರುವ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ರಾಜಶೇಖರ್, ಚಂದ್ರವಳ್ಳಿ ಪ್ರಾದೇಶಿಕ ಪತ್ರಿಕೆ ಸಂಪಾದಕ ಹರಿಯಬ್ಬೆ ಸಿ.ಹೆಂಜಾರಪ್ಪ ಸನ್ಮಾನಿತರಾಗಿ ಮಾತನಾಡಿದರು.
ಪತ್ರಕರ್ತರಾದ ಎಲ್.ಕಿರಣ್ ಕುಮಾರ್, ನಾಕೀಕೆರೆ ತಿಪ್ಪೇಸ್ವಾಮಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೋರ್ಸ್ ಮುಗಿಸಿ ಹೊರ ಹೋಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾಲೇಜಿನ ಕಾರ್ಯ ನಿರ್ವಾಹಕ ಮಹಂತೇಶ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.