ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ ಈಗಾಗಲೇ ಈ ವರ್ಷದ ತೆರಿಗೆ ಸಂಗ್ರಹ ಶೇ.35% ಕುಂಠಿತವಾಗಿರುವಾಗ ರಾಜ್ಯದಲ್ಲಿ ಆಸ್ತಿ ನೊಂದಣಿ ಬಹುತೇಕ ಸ್ತಬ್ಧವಾಗಿದ್ದು, ತೆರಿಗೆ ಸಂಗ್ರಹ ಗುರಿ ಮುಟ್ಟುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, 2024-25 ನೇ ಸಾಲಿನ ತಮ್ಮ ಬಜೆಟ್ ಗುರಿ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 26,000 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕಿತ್ತು. ಅಂದರೆ ಮಾಸಿಕವಾಗಿ ಸರಾಸರಿ 2,167 ಕೋಟಿ ರೂಪಾಯಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಸಂಗ್ರಹವಾಗಬೇಕು.
ಆದರೆ ಸರ್ವರ್ ಸಮಸ್ಯೆ, ಕಾವೇರಿ ತಂತ್ರಾಂಶ ಸಮಸ್ಯೆಯಿಂದ ಪ್ರತಿನಿತ್ಯ 8,000 ರಿಜಿಸ್ಟ್ರೇಷನ್ ಆಗುತ್ತಿದ್ದ ಕಡೆ ಈಗ ಕೇವಲ 200 ರಿಜಿಸ್ಟ್ರೇಷನ್ ಆಗುತ್ತಿದೆ. ಡಿಸೆಂಬರ್ ವರೆಗೆ ಕೇವಲ 75% ಗುರಿ ಮುಟ್ಟಲಾಗಿದ್ದು, ಇನ್ನೂ 9,000 ಕೋಟಿಯಷ್ಟು ಸಂಗ್ರಹವಾಗಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈ ವರ್ಷ ದೊಡ್ಡ ಮೊತ್ತದ ಆದಾಯ ಕೊರತೆ ಎದುರಿಸಬೇಕಾಗುವುದು ಗ್ಯಾರೆಂಟಿ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಆರ್ಥಿಕ ವರ್ಷದಲ್ಲಿ ಇನ್ನುಳಿದಿರುವ 50 ದಿನಗಳಲ್ಲಾದರೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಚುರುಕುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.