ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನರು ಗಾಯಗೊಂಡು ಅಸ್ವಸ್ಥರಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ‘ಅಶೋಕ ಜನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು, ಈ ವೇಳೆ ನೂಕುನುಗ್ಗಲು ಸಂಭವಿಸಿದೆ.
ಪರಿಣಾಮ ಘಟನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಏನಿದು ಘಟನೆ-
ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅಕ್ಟೋಬರ್-20 ರಂದು ಸೋಮವಾರ ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನಮನ-2025 ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಸಹ ಭಾಗಿಯಾಗಿದ್ದರು.
ಆದರೆ ಕ್ರೀಡಾಂಗಣ ಚಿಕ್ಕದಾಗಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲಾಗದೇ ಜನ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ಪುತ್ತೂರು ತಾಲೂಕಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೂಕುನುಗ್ಗಲಿನಲ್ಲಿ ಅಸ್ವಸ್ಥಗೊಂಡ ಯೋಗಿತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ(50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30) ಮತ್ತಿತರರು ಅಸ್ವಸ್ಥಗೊಂಡಿದ್ದರು.
ದೀಪಾವಳಿ ಹಬ್ಬ ಪ್ರಯುಕ್ತ ಜನರಿಗೆ ತಟ್ಟೆ, ವಸ್ತ್ರ ಹಂಚಲು ಶಾಸಕ ಅಶೋಕ್ ರೈ ಮಾಲೀಕತ್ವದ ಟ್ರಸ್ಟ್ ನಿಂದ ಯೋಜನೆಗೊಂಡಿತ್ತು, ದೀಪಾವಳಿ ಹಬ್ಬವೆಂದು ಜನರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮವು ಸಹ ಇತ್ತು. ಸಿಎಂ ಸಿದ್ದರಾಮಯ್ಯ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ್ದರು.
ಕಾರ್ಯಕ್ರಮಕ್ಕೆ ಸಣ್ಣ ಸಣ್ಣ ಮಕ್ಕಳನ್ನು ಸಹ ಕರೆದುಕೊಂಡು ಬಂದಿದ್ದು, ಕುಡಿಯಲು ನೀರು ಸಿಗದೆ ಜನರ ಪರದಾಡಿದ್ದಾರೆ. ಮೊದಲೇ ಮಳೆಯಿಂದಾಗಿ ಕೆಸರುಮಯವಾಗಿದ್ದ ಮೈದಾನದಲ್ಲಿ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.
ಪೊಲೀಸ್ ಇಲಾಖೆ ಅಕ್ಟೋಬರ್-19 ರಂದು ಕಾರ್ಯಕ್ರಮ ಆಯೋಜಕರಿಗೆ ಪತ್ರ ಬರೆದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚನೆ ನೀಡಿದ್ದರು. ಅಲ್ಪ ಸ್ವಲ್ಪ ಖುರ್ಚಿ ಹಾಕಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಕರ ಮೇಲೆ ಗರಂ ಆಗಿದ್ದು, ಹೆಚ್ಚಿನ ಆಸನ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿತ್ತು. ಬಳಿಕ ಆಯೋಜಕರು ಹೆಚ್ಚಿನ ಕುರ್ಚಿಗಳನ್ನು ಹಾಕಿದ್ದರು. ಆದರೂ ಸಹ ಈ ದುರ್ಘಟನೆ ನಡೆದಿದೆ.

