ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಾಡಾನೆ ದಾಳಿಗೆ ತುತ್ತಾಗುತ್ತಿರುವ ರೈತರು, ಕೂಲಿ ಕಾರ್ಮಿಕರ ಸಾವಿನ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ.
ಕಾಡಾನೆ ದಾಳಿಗೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದ ಬಳಿ ಭಾನುವಾರ ಸುಬ್ರಾಯಗೌಡ (65) ಮೃತಪಟ್ಟಿದ್ದಾರೆ. ಕಳೆದ ಗುರುವಾರ ಕಾರ್ಮಿಕರಾದ ಅನಿತಾ (25) ಎಂಬ ಯುವತಿ ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಅಂತರದಲ್ಲಿ ಅನ್ಯಾಯದ ಎರಡು ಸಾವುಗಳು ಸಂಭವಿಸಿವೆ.
ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಕಾಡಾನೆಗಳು ಕಾಣಿಸಿಕೊಂಡಿದ್ದವು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.
ಇದಲ್ಲದೆ ಬಾಳೆಹೊನ್ನೂರು-ಖಾಂಡ್ಯ ಸಂಪೂರ್ಣ ಬಂದ್ ಮಾಡಲಾಗಿತ್ತು. ಖಾಸಗಿ ಶಾಲೆಗೂ ರಜೆ ಘೋಷಿಸಲಾಗಿತ್ತು. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗಿದೆ. ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದು, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು, ಸಾರ್ವಜನಿಕರು ತೀವ್ರ ಆಕ್ರೋಶಗೊಂಡರು.
ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗು ಸಂಸದರು ಬರುವವರೆಗೂ ಪ್ರತಿಭಟನೆ ನಡೆಸಲಾಯಿತು.
ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಸರ್ವಪಕ್ಷ, ಸರ್ವ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಆನೆ ನೋಡಿ ಓಡಿದ ಶಾಲಾ ಮಕ್ಕಳು: ಬೊಳಿಯರ್ ಬಳಿಯ ಧರ್ಮಸ್ಥಳ ಸುಬ್ರಹ್ಮಣ್ಯ ರಾಷ್ಟ್ರೀಯ ಹೆದ್ದಾರಿಯಲ್ಲ ಬೆಳಗ್ಗೆ ಕಾಡಾನೆ ಕಂಡುಬಂದಿದೆ. ಈ ವೇಳೆ ಬಸ್ ನಿಲ್ದಾಣದಲ್ಲಿದ್ದ ಶಾಲಾ ಮಕ್ಕಳು, ಕಾಡಾನೆ ನೋಡಿ ಭಯಭೀತರಾಗಿ ಓಡಿಹೋಗಿರುವ ಘಟನೆ ಕೂಡಾ ನಡೆದಿದೆ. ಬಳಿಕ ಆನೆ ಕಾಡಿನತ್ತ ಸಂಚರಿಸಿದೆ.
ಕಳೆದ ಕೆಲ ದಿನಗಳಿಂದೆ ಬೊಳಿಯಾರ್, ನೆರ್ತನೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಾಡಾನೆಗಳು ಬೆಳೆ ನಾಶಮಾಡಿವೆ. ಇದಕ್ಕೂ ಎರಡು ವಾರಗಳ ಹಿಂದೆ ಕೊಕ್ಕಡ, ಸೌತಡ್ಕ ಸಮೀಪ ವ್ಯಕ್ತಿಯೊಬ್ಬರನ್ನು ಕಾಡಾನೆ ಸಾಯಿಸಿತ್ತು. ಹೀಗೆ ಕಾಡಾನೆಗಳಿಂದ ಸಾವು ನೋವು, ಬೆಳೆ ಹಾನಿ ಆಗುತ್ತಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ಹಾನಿ ಆಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

