ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶದ ವಿವಿಧೆಡೆ ನಡೆಯುತ್ತಿರುವ ಲವ್ ಜಿಹಾದ್ ಯಶಸ್ಸಿಗೆ ಹಿಂದೂ ಜನರ ಸಂಸ್ಕಾರ ಕೊರತೆಯೇ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಒಂದರಲ್ಲಿ ಮಾತನಾಡಿದರು. ಲವ್ ಜಿಹಾದ್, ಇದು ಹೇಗೆ ಆಗುತ್ತೆ? ನಮ್ಮ ರಕ್ತವನ್ನೇ ಹಂಚಿಕೊಂಡಿರುವ, ಹಿಂದೂ ಸಂಸ್ಕಾರದಲ್ಲೇ ಬೆಳೆದಿರುವ ಹುಡುಗ ಅಥವಾ ಹುಡುಗಿ ಕ್ಷಣಿಕ ಆಕರ್ಷಣೆಗೆ ಒಳಗಾಗಿ ಹೊರಗಿನವರ ಜೊತೆ ಹೋಗುತ್ತಾರೆ.
ಇದು ನಮಗಿರುವ ಕೊರತೆ. ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಮರ್ಯಾದೆಯ ಅರಿವು ಕೊಡುವುದು ನಮ್ಮ ಜವಾಬ್ದಾರಿ. ಅದರಲ್ಲಿ ನಾವು ವಿಫಲರಾಗಿದ್ದೇವೆ. ಅದರಿಂದಾಗಿ ಲವ್ ಜಿಹಾದ್ ಯಶಸ್ಸು ಪಡೆದಿದೆ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಲವ್ ಜಿಹಾದ್ ನಡೆದಾಗ ಇಡೀ ಮುಸ್ಲಿಂ ಸಮಾಜವನ್ನೇ ದೂಷಿಸುತ್ತೇವೆ. ಅದು ಒಳ್ಳೆಯದಲ್ಲ. ನಾವು ಹಿಂದೂಗಳು, ಆ ರೀತಿ ಆಲೋಚನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜಕೀಯದಿಂದ ದೂರ-
ಯಾವುದೇ ರಾಜಕೀಯ ಪಕ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿಸುವುದಿಲ್ಲ. ವೋಟ್ ಪೊಲಿಟಿಕ್ಸ್ನಲ್ಲಿ ತೊಡಗುವುದಿಲ್ಲ. ನಾವು ನೀತಿಗಳಿಗೆ ಬೆಂಬಲ ನೀಡುತ್ತೇವೆ. ಸರಿಯಾದ ನೀತಿಯನ್ನು ಬೆಂಬಲಿಸಲು ಒತ್ತಡ ಹೇರುತ್ತೇವೆ. ವ್ಯಕ್ತಿಯಲ್ಲ, ಪಕ್ಷವನ್ನ, ನೀತಿ ಮುಖ್ಯ. ಉದಾಹರಣೆಗೆ, ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕಿತ್ತು. ನಮ್ಮ ಸ್ವಯಂ ಸೇವಕರು ಆ ಹೋರಾಟದಲ್ಲಿ ತೊಡಗಿದ್ದರು.
ಬಿಜೆಪಿಯೂ ಜೊತೆಗೆ ನಿಂತಿತು. ಕಾಂಗ್ರೆಸ್ ಪಕ್ಷವೂ ಬೆಂಬಲಿಸಿದ್ದರೆ ನಮ್ಮ ಸ್ವಯಂಸೇವಕರು ಆ ಪಕ್ಷಕ್ಕೂ ವೋಟ್ ಹಾಕುತ್ತಿದ್ದರು’ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಸಂಘದ ಪಕ್ಷ ಎಂಬುದಿಲ್ಲ. ಯಾವ ಪಕ್ಷವೂ ನಮ್ಮದಲ್ಲ. ಎಲ್ಲಾ ಪಕ್ಷಗಳೂ ಭಾರತೀಯ ಪಕ್ಷಗಳೇ ಆದ್ದರಿಂದ ಅವರೆಲ್ಲವೂ ನಮ್ಮವೇ. ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೋ ಹೊರತು ರಾಜನೀತಿಯನ್ನಲ್ಲ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

