ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನರಿಗೆ ನ್ಯಾಯ ಕೊಡಿಸುವಲ್ಲಿ ನ್ಯಾಯಾಲಯಗಳ ಹೊಣೆಗಾರಿಕೆ ಅತಿಮುಖ್ಯವಾಗಿದ್ದು, ಇವು ತ್ವರಿತ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಕುಂಭಜದಳ ಮನ್ಮಧರಾವ್ ತಿಳಿಸಿದರು.
ಆಂಧ್ರಪ್ರದೇಶ ಉಚ್ಛ ನ್ಯಾಯಾಲಯದಿಂದ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ನಂತರ ತಮ್ಮ ಕಚೇರಿಯ ಅಧಿಕಾರ ವಹಿಸಿಕೊಂಡು ಮಾತನಾಡಿದರು.
ಕರ್ನಾಟಕ ರಾಜ್ಯ ಹಲವು ಪ್ರಖ್ಯಾತ ನ್ಯಾಯಾಧೀಶರನ್ನು ಕೊಡುಗೆಯಾಗಿ ನೀಡಿದೆ. ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ತಾವು ಕೆಲಸ ನಿರ್ವಹಿಸುವುದು ಹೊಸ ಸವಾಲಿನ ಜೊತೆಗೆ ಸಂತೋಷ ತಂದಿದೆ. ಎಲ್ಲರ ಸಹಕಾರ ಸ್ಪಂದನೆಯನ್ನು ಬಯಸಿ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.
ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರಾದ ಮಿಟ್ಟಲ ಕೋಡ್ ಅವರು ಮಾತನಾಡಿ, ನ್ಯಾಯಮೂರ್ತಿ ಕುಂಭಜದಳ ಮನ್ಮಧರಾವ್ ಅವರು 1967 ರಲ್ಲಿ ನೆಲ್ಲೂರಿನ ವೈಪಾಡು ಗ್ರಾಮದಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಗುಂಟೂರು ಹಾಗೂ ನೆಲ್ಲೂರಿನಲ್ಲಿ ಪೂರೈಸಿದರು. ಕಾನೂನು ಪದವಿಯನ್ನು ಆಂಧ್ರಪ್ರದೇಶ ವಿಶ್ವವಿದ್ಯಾಲಯದ ನ್ಯಾಯ ವಿದ್ಯಾಪರಿಷತ್ ಕಾನೂನು ಕಾಲೇಜಿನಲ್ಲಿ, ಹೈದರಾಬಾದ್‍ನ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಸೈಬರ್ ಲಾ ನಲ್ಲಿ ಸ್ನಾತಕೋತ್ತರ ಡಿಪ್ಲಮಾ, ಕಾನೂನು ಸ್ನಾತಕೋತ್ತರ ಪದವಿಯನ್ನು ಪಿಜಿ ಲಾ ಕಾಲೇಜು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಇಲ್ಲಿ ಪಡೆದರು. ನಂತರ ಆಂಧ್ರ ವಿಶ್ವವಿದ್ಯಾಲಯದಿಂದ ಪಿಹೆಚ್‍ಡಿ ಪದವಿಯನ್ನು ಸಹ ಪಡೆದಿದ್ದಾರೆ. ಅವರಿಗೆ 2014 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ್ ವಿಜ್ಞಾನ್ ರತ್ನ ಪ್ರಶಸ್ತಿ ಸಹ ಲಭಿಸಿದೆ ಎಂದರು.
1991 ರಲ್ಲಿ ಪರಿಷತ್ ನಲ್ಲಿ ನೋಂದಾಯಿಸಿ ವಕೀಲ ವೃತ್ತಿ ಆರಂಭಿಸಿದ ಇವರು ನಂತರ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದರು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಬಿ.ಎಸ್.ಎನ್.ಎಲ್, ಯುಪಿಐ, ಕಾರ್ಪೋರೇಷನ್ ಬ್ಯಾಂಕ್ ಮುಂತಾದವುಗಳಿಗೆ ಕೌನ್ಸಿಲ್ ಆಗಿ ಸೇವೆ ಸಲ್ಲಿಸಿದರು. ಹೈದರಾಬಾದ್‍ನ ಜಾರಿ ನಿರ್ದೇಶನಾಲಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ನಿರ್ವಹಿಸಿದರು.
ಅಲ್ಲದೇ ಕಂಪ್ಯೂಟರ್ ಅಪರಾಧಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ನೆಟ್ ಬ್ಯಾಂಕಿಂಗ್ ಸೇವೆಗಳು ಮತ್ತು ಅಪರಾಧಗಳು ಮುಂತಾದ ವಲಯಗಳಲ್ಲಿ ಅಧ್ಯಯನ ಹಾಗೂ ಪ್ರಕರಣ ವಿಲೇವಾರಿಯಲ್ಲಿ ಯಶಸ್ವಿಯಾಗಿದ್ದಾರೆ. ಅವರು ತೆರಿಗೆ, ಮಾದಕ ದ್ರವ್ಯ ಮುಂತಾದ ವಿಷಯಗಳಲ್ಲಿ ಒಳ್ಳೆಯ ಭಾಷಣಗಳನ್ನು ನೀಡಿ ಮನ್ನಣೆ ಗಳಿಸಿದ್ದಾರೆ.
ನಂತರ 2021 ರಲ್ಲಿ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಇದೀಗ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ವಿವಿಧ ರಾಜ್ಯಗಳಿಂದ ನ್ಯಾಯಾಧೀಶರ ವರ್ಗಾವಣೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಹೊಸ ಮೈಲುಗಲ್ಲಾಗಿದೆ. ಇವರಿಂದ ನ್ಯಾಯಾಧೀಶರಿಗೆ ಸಮಾನ ಅವಕಾಶ ದೊರೆಯುವ ಜೊತೆಗೆ ದೇಶದಲ್ಲಿ ಏಕತೆ ಹಾಗೂ ಸೌಹಾರ್ದತೆ ನೆಲೆಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಭಾರ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರರಾವ್ ನೂತನ ನ್ಯಾಯಾಧೀಶರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು ಉಪಸ್ಥಿತರಿದ್ದರು.