ಭಾರೀ ಮಳೆ ಹೊಲಗಳಿಗೆ ನುಗ್ಗಿದ ನೀರು, ಕೊಚ್ಚಿಹೋದ ರಸ್ತೆಗಳು

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಆಶ್ಲೇಷ ಮಳೆ ಆರಂಭವಾಗಿ ಏಳು ದಿನಗಳು ಕಳೆದಿದ್ದು
, ಬಹುತೇಕ ಎಲ್ಲಾ ದಿನಗಳಲ್ಲಿ ಮಳೆ ಎಲ್ಲೆಡೆ ಸುರಿದಿದ್ದು ತಾಲ್ಲೂಕಿನಾದ್ಯಂತ 877.08 ಎಂ.ಎಂ. ಮಳೆಯಾಗಿದೆ. ಕಳೆದ ಸೋಮವಾರ 4ರಿಂದ ಆ.9ರ ಶನಿವಾರದ ತನಕ ಮಳೆಯಾಗಿದ್ದು, ಬಹುತೇಕ ತಾಲ್ಲೂಕಿನೆಲ್ಲೆಡೆ ಮಳೆ ನೀರಿನಿಂದ ಹಳ್ಳ, ಕೊಳ್ಳಲು ತುಂಬಿ ಹರಿದು, ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗಿದೆಯಲ್ಲದೆ, ಲಕ್ಷಾಂತರ ರೂಪಾಯಿ ಬೆಳೆಯೂ ಸಹ ನೀರಿನಲ್ಲಿ ಕೊಚ್ಚಿಹೋಗಿದೆ. ಮಳೆಯಾಗಿ ಪ್ರತಿನಿತ್ಯ ಪರಿತಪಿಸುತ್ತಿದ್ದ ರೈತ ನಿತ್ಯದ ಮಳೆಯಿಂದ ಪಷ್ಯತಾಪ ಪಡುವಂತಾಗಿದೆ.

ಶನಿವಾರ ರಾತ್ರಿ ತಾಲ್ಲೂಕಿನಾದ್ಯಂತ ನಾಯಕನಹಟ್ಟಿ-32.02, ತಳಕು-31.02, ಚಳ್ಳಕೆರೆ-24.00, ಪರಶುರಾಮಪುರ-06.04, ದೇವರಮರಿಕುಂಟೆ-4.04 ಒಟ್ಟು 97.012 ಮಳೆಯಾಗಿದ್ದು, ಈ ಹಿಂದೆ 779.16 ಎಂ.ಎಂ ಮಳೆಯಾಗಿದ್ದು ಇದು ಸೇರಿ ಒಟ್ಟು 877.08 ಎಂ.ಎಂ ಮಳೆಯಾಗಿದೆ.

- Advertisement - 

ತಳಕು ಹೋಬಳಿಯ ಗೌರಸಮುದ್ರ ತುಮಲುಪ್ರದೇಶದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ತುಮಲು ರಸ್ತೆಯ ತುಂಬ ನೀರು ಹರಿದು ಅಸ್ವಸ್ಥವಾಗಿದೆ. ಬೂದಿಹಳ್ಳಿಯಿಂದ ಗೌರಸಮುದ್ರ ತುಮಲು ಪ್ರದೇಶಕ್ಕೆ ಹೋಗುವ ರಸ್ತೆಯಲ್ಲೂ ಸಹ ಮಿತಿಮೀರಿ ಆಳಾವಾದ ಗುಂಡಿಗಳಾಗಿದ್ದು, ಗುಂಡಿಯ ತುಂಬ ನೀರು ತುಂಬಿ, ವಾಹನ, ಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿಡಿದು ಸಾಗಬೇಕಿದೆ. ಕಳೆದ ವರ್ಷವೂ ಸಹ ಮಳೆಗಾಲದ ಸಂದರ್ಭದಲ್ಲಿ ಇದೇ ರಸ್ತೆ ಮಳೆಯಿಂದ ಹಾನಿಯಾಗಿತ್ತು. ಇಡೀ ರಸ್ತೆಯೇ ಗುಂಡಿಯಿಂದ ಆವೃತ್ತವಾಗಿದೆ. ರಸ್ತೆಯ ಪಕ್ಕದಲ್ಲಿ ಹಳ್ಳದ ನೀರು ಹರಿಯುತ್ತಿದ್ದು ರಸ್ತೆಯ ಒಂದು ಭಾಗ ಸಹ ಕೊಚ್ಚಿಹೋಗಿದೆ. ಯಾವುದೇ ಸಮಯದಲ್ಲಾದರೂ ಮಳೆ ಬಂದರೆ ಇಡೀ ರಸ್ತೆ ಕುಸಿಯುವ ಸಂದರ್ಭವಿದ್ದು ಗ್ರಾಮಸ್ಥರು ರಸ್ತೆ ದುರಸ್ಥಿಪಡಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ತಾಲ್ಲೂಕಿನಹಿರೇಹಳ್ಳಿ ಗ್ರಾಮದಲ್ಲಿ ರೈತ ಎಸ್.ಕೆ.ಸಣ್ಣಬೋರಯ್ಯ ಎಂಬುವವರ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸುಮಾರು 30 ಸಾವಿರ ನಷ್ಟವಾಗಿದೆ. ಇದೇ ಗ್ರಾಮದ ಕ್ಯಾತಪ್ಪ ಎಂಬುವವರ ರಿ, ಸರ್ವೆ ನಂ. 273ರಲ್ಲಿದ್ದ ಮೆಕ್ಕೆಜೋಳ ನೀರಿನಿಂದ ಆವೃತ್ತವಾಗಿ ಸುಮಾರು 40 ಸಾವಿರ ನಷ್ಟವಾಗಿದೆ. ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ತಿಪ್ಪೇರುದ್ರಪ್ಪನವರ ಶೇಂಗಾ ಬೆಳೆಯೂ ಸಹ ನೀರಿನಲ್ಲಿ ಕೊಚ್ಚಿಹೋಗಿ 30 ಸಾವಿರ ನಷ್ಟ ಉಂಟಾಗಿದೆ. ತಾಲ್ಲೂಕಿನ ಗೋಸಿಕೆರೆ ಕಾವಲಿನ ಜಯಮ್ಮ ಎಂಬುವವರ ಜಮೀನಿನಲ್ಲಿದ್ದ ಶೇಂಗಾ ಬೆಳೆ ಹಳ್ಳಹರಿದ ಪರಿಣಾಮ ಸಂಪೂರ್ಣಬೆಳೆ ಕೊಚ್ಚಿಹೋಗಿ 50 ಸಾವಿರ ನಷ್ಟವಾಗಿದೆ.

- Advertisement - 

 ಚಳ್ಳಕೆರೆನಗರದಲ್ಲೂ ಮಳೆ ಅವಾಂತರ ಕಡಿಮೆ ಏನಲ್ಲ :- ಮಳೆಯ ನೀರಿನಿಂದ ರಹೀಂನಗರ, ಅಭಿಷೇಕ್ ನಗರ, ಅಂಬೇಡ್ಕರ್, ಮದಕರಿನಗರದ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಖಾಸಗಿ ಬಸ್ಟಾಂಡ್ನ ಎಸ್.ಆರ್.ಕಾಂಪ್ಲೆಕ್ಸ್ ಮುಂಭಾಗದಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆಯಾಗಿದ್ದು ವಾಹನ ಸಂಚಾರಕ್ಕೆ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗಿತ್ತು, ರಾತ್ರೋರಾತ್ರಿ ಪೌರಾಯುಕ್ತ ಜಗರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಗಣೇಶ್, ಮಹಾಲಿಂಗಪ್ಪ, ರುದ್ರಮುನಿ ಹಾಗೂ ಸಿಬ್ಬಂದಿ ವರ್ಗ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದರು.

ಇದೇ ಸಂದರ್ಭದಲ್ಲಿ ನಗರದ ಕೆಲವು ಪ್ರದೇಶಗಳಿಗೆ ನಗರಸಭೆ ಸಿಬ್ಬಂದಿಯೊಂದಿಗೆ ಪೌರಾಯುಕ್ತರು ಭೇಟಿ ನೀಡಿ ನಿಂತನೀರು ಹರಿಯುವ ವ್ಯವಸ್ಥೆ ಮಾಡಿದರು. ಶಾಂತಿನಗರ, ಜಾಫರ್ಶರೀಫ್ ಲೇಔಟ್, ಹೌಸಿಂಗ್ಬೋರ್ಡ್ ಕಾಲೋನಿ, ತ್ಯಾಗರಾಜ ನಗರದ ತಗ್ಗು ಪ್ರದೇಶಗಳಲ್ಲೂ ನೀರು ನಿಂತಿದ್ದು ನೀರನ್ನು ಹರಿಯುವ ವ್ಯವಸ್ಥೆ ಮಾಡಬೇಕಿದೆ.

ಪ್ರತಿವರ್ಷದ ಮಳೆಗಾಲದಲ್ಲಿ ರಹೀಂನಗರ, ಗಾಂಧಿನಗರ, ಅಂಬೇಡ್ಕರ್ನಗರ ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದು, ನಗರಸಭೆ ಆಡಳಿತ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕಿದೆ. ನಗರದ ಪ್ರಧಾನ ರಸ್ತೆಗಳಲ್ಲೂ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.

 

Share This Article
error: Content is protected !!
";