ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಡಹಗಲೇ ಬರೋಬ್ಬರಿ 7.11 ಕೋಟಿ ರೂಪಾಯಿ ದರೋಡೆಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್, ಬುಧವಾರ ಮಧ್ಯಾಹ್ನ ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಪರಾರಿಯಾಗಿದೆ.
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ನ ಬಳಿ ತಡೆದು ಹಣ ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ತುಂಬಲು ಬರುತ್ತಿದ್ದ ವಾಹನ ತೆರಳುತ್ತಿತ್ತು. ಇನ್ನೋವಾ ಕಾರಿನಲ್ಲಿ ಬಂದ ಆರೇಳು ಜನರ ಗ್ಯಾಂಗ್ ಜಯದೇವ ಡೇರಿ ಸರ್ಕಲ್ನಲ್ಲಿ ಎಟಿಎಂ ವಾಹನ ತಡೆದು ನಾವು ಆರ್ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದಾರೆ.
ಗನ್ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ಗೆ ಕರೆದೊಯ್ದಿದ್ದಾರೆ. ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಸುದ್ದಗುಂಟೆಪಾಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್‌ಪಿಲ್ಲರ್ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ದರೋಡಕೋರರು ತಾವು ಆರ್‌ಬಿಐ ಅಧಿಕಾರಿಗಳು ಎಂದು ಹೇಳಿ ಹಣ ತುಂಬಿದ್ದ ವಾಹನವನ್ನೇ ಹೈಜಾಕ್ ಮಾಡಿದ್ದಾರೆ. ನಂತರ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಫ್ಲೈಓವರ್ನಲ್ಲಿ ವಾಹನ ನಿಲ್ಲಿಸಿ ಹಣವನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಎಟಿಎಂ ಹಣ ತುಂಬಲು ಹೋಗುತ್ತಿದ್ದ ವಾಹನದಲ್ಲಿ ಒಟ್ಟು ನಾಲ್ಕು ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಈ ಪೈಕಿ ಓರ್ವ ಡ್ರೈವರ್, ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ. ಇನ್ನು ಫಿಂಗರ್ ಪ್ರಿಂಟ್ ತಂಡ ಹಾಗೂ ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಆಗಮಿಸಿದ್ದು ತನಿಖೆ ಚುರುಕುಗೊಳಿಸಲಾಗಿದೆ.
ಪೊಲೀಸರು ಹೈಅಲರ್ಟ್:
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೈ ಅಲರ್ಟ್ ಆಗಿದ್ದು ನಗರದಲ್ಲಿ ಹೈಅಲರ್ಟ್ ಘೋಷಿಸಿದ್ದಾರೆ. ದರೋಡೆಕೋರರು ಬೆಂಗಳೂರು ಬಿಟ್ಟು ಹೋಗದಂತೆ ನಗರದ ಗಡಿಪ್ರದೇಶದಲ್ಲಿ ಬ್ಯಾರಿಕೆಡ್ ಹಾಕಿ ವಾಹನ ಪರಿಶೀಲನೆ ಮಾಡುವಂತೆ ಸಂದೇಶ ರವಾನಿಸಿದ್ದು ಎಲ್ಲ ರಸ್ತೆಗಳಲ್ಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.

