ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಿಳೆಯು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಗುರುತಿಸಿಕೊಂಡು ಸಮಾಜದ ಪ್ರಗತಿಯ ಪ್ರಮುಖ ಭಾಗವಾಗಿದ್ದಾರೆ ಎಂದು ಲಯನ್ಸ್‌ಕ್ಲಬ್ ಅಧ್ಯಕ್ಷೆ ಮಂಗಳಗೌರಿ ಪರ್ವತಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಅಭಿನೇತ್ರಿ ಸಾಂಸ್ಕೃತಿಕ ಸಂಘ, ಅಭಿನೇತ್ರಿ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ತ್ರೀ ಸಂಭ್ರಮ – ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಭದ್ರ ಹಾಗೂ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಅಪಾರ ಎಂದು ತಿಳಿಸಿದರು.
ಅಜಾಕ್ಸ್‌ಶಾಲೆಯ ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯಲ್ಲಿ ಅಗಾಧವಾದ ಶಕ್ತಿಯಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುವ ಮನೋಸ್ಥೆರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್ಯವೈಶ್ಯ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ರಾಜಶೇಖರ್‌ಮಾತನಾಡಿ, ಮಹಿಳೆಯರಿಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಎಂತಹ ಸಾಧನೆಯನ್ನೂ ಮಾಡುತ್ತಾರೆ ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದರು.
ಗೃಹಿಣಿ ಗೌರಿ ರಾಮಕೃಷ್ಣ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಾಮಾಜಿಕ ಪ್ರಜ್ಞೆಯನ್ನು ನೀಡಿದಾಗ ಮಕ್ಕಳು ದೇಶದ ಆಸ್ತಿಯಾಗಿ ಬೆಳೆಯುತ್ತಾರೆ. ಅಂತಹ ಸಮಾಜಸ್ನೇಹಿ ಸಮುದಾಯ ನಿರ್ಮಾಣ ಎಲ್ಲ ತಾಯಂದಿರ ಕನಸಾಗಬೇಕು. ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವುದು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್‌ಮಾತನಾಡಿ, ಕಳೆದ 20 ವರ್ಷಗಳಿಂದ ವಿವಿಧ ಹಂತಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಮಹಿಳೆಯರ ಅಭ್ಯುದಯ, ಸಾಂಸ್ಕೃತಿಕ ಪ್ರತಿಭೆಗಳ ಉತ್ತೇಜನಕ್ಕೆ ಅಗತ್ಯ ವೇದಿಕೆಯನ್ನು ಅಭಿನೇತ್ರಿ ಸಾಂಸ್ಕೃತಿಕ ಸಂಘ ಒದಗಿಸುತ್ತಾ ಬಂದಿದೆ. ಸಂಘದ ಮೂಲಕ ಹಲವು ಅನನ್ಯ ಪ್ರತಿಭೆಗಳು ಸಮಾಜಕ್ಕೆ ಪರಿಚಿತವಾಗಿವೆ ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಗಾಯತ್ರಿ ಪ್ರಕಾಶ್, ತೂಬಗೆರೆಯ ಜಯಕಾಂತಮ್ಮ, ರೈತ ಮಹಿಳೆ ನಾರಾಯಣಮ್ಮ ವೆಂಕಟಸ್ವಾಮಿ, ನಗರಸಭಾ ಸದಸ್ಯೆ ವಾಣಿ, ಅಭಿನೇತ್ರಿ ಮಹಿಳಾ ಸಂಘದ ಅಪೂರ್ವ ಅರವಿಂದಗೌಡ, ಚಿನ್ಮಯಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.