ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಜ್ಯದ ಆಡಳಿತ ಪಕ್ಷದ ಶಾಸಕರುಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಮಾಧ್ಯಮದವರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ರಣದೀಪ್ ಸಿಂಗ್ ಸುರ್ಜೆವಾಲ ಅವರು ಪದೇ ಪದೆ ಬೆಂಗಳೂರಿಗೆ ಬರ್ತಾ ಇದ್ದಾರೆ. ಬಂದಾಗಲೆಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಮೂರು ದಿನಗಳವರೆಗೆ ಇರ್ತಾರೆ. ಇದರ ಹಿನ್ನೆಲೆ ಏನಂದ್ರೆ, ಡಿ. ಕೆ. ಶಿವಕುಮಾರ್ ಜೊತೆ ನೂರು ಜನ ಶಾಸಕರಿದ್ದಾರೆ. ಅವರಿಗೂ ಅವಕಾಶ ಕೂಡಬೇಕು ಎಂಬ ನಾನಾ ಹೇಳಿಕೆ ನೀಡುತ್ತಿದ್ದಾರೆ. ಬಿ. ಆರ್. ಪಾಟೀಲ್ ಹಾಗೂ ರಾಜು ಕಾಗೆ ಹೇಳಿಕೆ ನೋಡಿದ್ರೆ ಗೊತ್ತಾಗುತ್ತದೆ. ಒಂದಂತೂ ಸತ್ಯ, ಆಡಳಿತ ಪಕ್ಷದ ಶಾಸಕರು ಸಿಎಂ ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರ ರೀತಿಯಲ್ಲೇ ರಾಜ್ಯದ ಜನರಿಗೂ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಥಾನ ಪಲ್ಲಟ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಮ್ಮ ಪಕ್ಷಕ್ಕೂ ಹಾಗೂ ರಾಜ್ಯದ ಜನರಿಗೂ ಸಹ ವ್ಯತ್ಯಾಸವಾಗಲ್ಲ. 15ನೇ ಬಜೆಟ್ ಮಂಡನೆ ಮಾಡಿದ ಅನುಭವಿ ಸಿಎಂ ಸಿದ್ದರಾಮಯ್ಯನವರ ಆಡಳಿತ ವ್ಯವಸ್ಥೆ ಹೇಗೆ ಕುಸಿದು ಬಿದ್ದಿದೆ ಅಂದ್ರೆ ಹಣಕಾಸಿನ ಪರಿಸ್ಥಿತಿ ಕುಸಿದಿದ್ದು, ಯಾರೇ ಸಿಎಂ ಆಗಿ ಬಂದ್ರೂ ಸಹ ಅಭಿವೃದ್ದಿ ಸಾಧ್ಯವಿಲ್ಲ ಎಂಬಂತೆ ಆಗಿದೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರಾ, ಯಾರು ಅವರನ್ನು ಇಂಪ್ರೇಸ್ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಸುರ್ಜೆವಾಲ ಅವರು ಸುಮ್ಮನೆ ಕರ್ನಾಟಕಕ್ಕೆ ಬರ್ತಾ ಇಲ್ಲ ಎನ್ನುವುದಂತ ಸತ್ಯ. ಏನಾದ್ರೂ ಒಂದು ಅಜೆಂಡಾ ಇಟ್ಟುಕೊಂಡೇ ಸುರ್ಜೇವಾಲಾ ಬರುತ್ತಿದ್ದಾರೆ. ಅವರು ತನ್ನ ಅಜೆಂಡಾವನ್ನು ಜಾರಿ ಮಾಡಲು ಬರ್ತಾ ಇದ್ದಾರೆ. ಅದು ಸಿಎಂ ಹಾಗೂ ಆಡಳಿತ ಪಕ್ಷದ ಎಲ್ಲಾರಿಗೂ ಗೊತ್ತಿದೆ ಎಂದು ಅವರು ಹೇಳಿದರು.
ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ದೇಶ ದ್ರೋಹಿಗಳಿದ್ದಾರೆ. ಎರಡು ಧರ್ಮಗಳ ವಿರುದ್ದ ಸಂಘರ್ಷ ನಡೆಯುತ್ತಲೇ ಇರಬೇಕು. ಈ ದುರುದ್ದೇಶದಿಂದಲೇ ಘಟನೆಗಳು ನಡೆಯುತ್ತಿವೆ. ಆದರೆ, ದುರಂತ ಏನಂದ್ರೆ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮಂಗಳೂರಿನಲ್ಲಿ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣ ಇರಬಹುದು. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೇ ಬೆದರಿಸುವ ಕುತಂತ್ರ ನಡೆಸಲಾಗುತ್ತಿದೆ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವ ರೀತಿ ಘಟನೆ ನಡೆಯುತ್ತಿದೆ. ಇದು ಒಂದು ರೀತಿಯ ಷಡ್ಯಂತ್ರ. ಇದಕ್ಕೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇರುವ ಪರಿಣಾಮ ದೇಶದ್ರೋಹಿಗಳಿಗೂ ಸಹ ಧೈರ್ಯ ಬರ್ತಾ ಇದೆ. ಯಾರೇ ಏನ್ ಮಾಡಿದ್ರು ಸಹ ರಾಜ್ಯ ಸರ್ಕಾರ ನಮಗೆ ಬೆಂಬಲ ನೀಡ್ತಾ ಇದೆ. ನಮ್ಮನ್ನು ಯಾರೂ ಅಲ್ಲಾಡಿಸಲು ಆಗ್ತಾ ಇಲ್ಲ. ಯಾವುದೇ ಶಿಕ್ಷೆ ಕೊಡಿಸಲು ಆಗುವುದಿಲ್ಲ. ಬೇಲಿನೇ ಎದ್ದು ಹೊಲ ಮೇಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಸಿಎಂ ಮತ್ತು ಗೃಹ ಸಚಿವರು ಎಲ್ಲಿದ್ದಾರೆ ಎಂದು ಜನ ಪ್ರಶ್ನೆ ಮಾಡ್ತಾ ಇದ್ದಾರೆ ಎಂದರು.
ರಾಜ್ಯದಲ್ಲಿ ಸಿಎಂ ಸ್ಥಾನಕ್ಕಿಂತ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು 9-10 ರಂದು ವಿದೇಶಿ ಪ್ರವಾಸ ಮುಗಿಸಿಕೊಂಡು ಬರಬಹುದು. ಆಗ ಚರ್ಚೆ ನಡೆಯುತ್ತದೆ. ಎಲ್ಲವೂ ಸಹ ಆಗ ತಿಳಿಯುತ್ತದೆ ಎಂದು ವಿಜಯೇಂದ್ರ ಹೇಳಿದರು.
ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಹಾಸನದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿರುವುದು ತಾಜಾ ಉದಾಹರಣೆ. ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿನ ಉಸ್ತುವಾರಿ ಸಚಿವರು ಅಲ್ಲಿಗೆ ಕಳೆದ ಮೂರು ತಿಂಗಳಿನಿಂದ ಭೇಟಿ ನೀಡಿಲ್ಲ. ಕಳೆದ ಮೂರು ತಿಂಗಳಿನಿಂದ ಸಚಿವರು ಭೇಟಿ ನೀಡದೇ ಬೇಜವಾಬ್ದಾರಿತನ ತೋರಿದ್ದಾರೆ. ಸರ್ಕಾರ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಬೇಡ ಎಂದು ವಿಜಯೇಂದ್ರ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗ್ಯಾರಂಟಿ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ರಸ್ತೆಗಳು, ಅಭಿವೃದ್ಧಿ ಮಾಡಬೇಕು ಎಂದರೆ ಹಣ ಇಲ್ಲ, ಗ್ಯಾರಂಟಿ ಯೋಜನೆ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನಬಹುದು. ಬಿಜೆಪಿ ಸಲಹೆ ನೀಡಿದರೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಿ ನೌಕರರಿಗೂ ಸಂಬಳವಾಗುತ್ತಿಲ್ಲ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ತಿಳಿಯುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿಕಾರಿದರು.
ಸರ್ಕಾರ ಆರ್ಥಿಕ ದುಸ್ಥಿತಿಗೆ ತಲುಪಿದೆ. ಇದನ್ನು ಹೇಳಿದರೆ ಸಿಎಂ ಎಲ್ಲವೂ ಸರಿ ಇದೆ ಎನ್ನುತ್ತಿದ್ದಾರೆ. ಆದರೆ ಅವರದೇ ಆರ್ಥಿಕ ಸಲಹೆಗಾರರು ಈ ರೀತಿ ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವುದು ಸಾಬೀತಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ಇಂತಹ ಸರ್ಕಾರ ಅಧಿಕಾರಕ್ಕೆ ತಂದಿದ್ದೇವಲ್ಲ ಎಂದು ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.